ಫ್ಯಾಶಿಸ್ಟ್ ಸಿದ್ಧಾಂತ ಎಂದಿಗೂ ಜನರ ಹೃದಯ ಗೆಲ್ಲಲು ಸಾಧ್ಯವಿಲ್ಲ: ದಿಲ್ಲಿ ಫಲಿತಾಂಶದ ಬಗ್ಗೆ ಕುಮಾರಸ್ವಾಮಿ

Update: 2020-02-11 12:10 GMT

ಬೆಂಗಳೂರು, ಫೆ. 11: ‘ಅಭಿವೃದ್ಧಿ ಹರಿಕಾರನನ್ನು ‘ಭಯೋತ್ಪಾದಕ’ ಎಂದಿದ್ದಕ್ಕಾಗಿ ತಕ್ಕ ಪಾಠ ಕಲಿಸಿದ್ದಾರೆ. ಈ ಮೂಲಕ ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಎತ್ತಿಹಿಡಿದ ದೆಹಲಿಯ ಮತದಾರರು ತಮ್ಮ ಆದ್ಯತೆ ಅಭಿವೃದ್ಧಿಗೆ ಅಷ್ಟೇ ಎಂಬುದರ ಮೇಲ್ಪಂಕ್ತಿ ಹಾಕಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ದಿಲ್ಲಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಹೃದಯಪೂರ್ವಕ ಅಭಿನಂದನೆಗಳು. ಫ್ಯಾಶಿಸ್ಟ್ ಸಿದ್ಧಾಂತವು ಎಂದಿಗೂ ಜನರ ಹೃದಯ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ದಿಲ್ಲಿಯ ಜನರು ತೋರಿಸಿದ್ದಾರೆ. ಹಣ, ತೋಳ್ಬಲಗಳಿಲ್ಲದೆಯೂ ಅಭಿವೃದ್ಧಿಯನ್ನೇ ಮಾನದಂಡವನ್ನಾಗಿಸಿ ಯಶಸ್ವಿ ರಾಜಕಾರಣದ ಸಾಧ್ಯತೆಯನ್ನು ಸಾಕ್ಷೀಕರಿಸಿದ ಎಎಪಿ ಹಾಗೂ ದೆಹಲಿ ಮತದಾರರಿಗೆ ಅಭಿನಂದನೆ’ ಎಂದು ತಿಳಿಸಿದ್ದಾರೆ.

‘ಬಿಜೆಪಿ, ಅದರಲ್ಲೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಇಡೀ ಕೇಂದ್ರ ಸರಕಾರ ತನ್ನ ‘ಚಾಣಕ್ಯ’ ಬಲ ಪ್ರದರ್ಶಿಸಿದರೂ ದೆಹಲಿಯ ಪ್ರಬುದ್ಧ ಮತದಾರ ತನ್ನ ನಿಲುವು ಬದಲಿಸಲಿಲ್ಲ. ಜನತಾ ನ್ಯಾಯಾಲಯದ ಈ ತೀರ್ಪು ಸ್ವಾಗತಾರ್ಹ’ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News