ಭೂ ರಹಿತರ ಬೇಡಿಕೆ ಈಡೇರಿಸಿ: ಸಿಎಂಗೆ ಎಚ್.ಎಸ್.ದೊರೆಸ್ವಾಮಿ ನೇತೃತ್ವದ ನಿಯೋಗ ಮನವಿ

Update: 2020-02-11 12:12 GMT

ಬೆಂಗಳೂರು, ಫೆ.11: ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಭೂಮಿ ಹಾಗೂ ನಿವೇಶನ ರಹಿತರ ಸಮಸ್ಯೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಸಿಎಂ, ರಾಜ್ಯದ ಯಾವುದೇ ಕಡೆ ಸರಕಾರಿ ಜಾಗದಲ್ಲಿ ಮನೆ-ಜಮೀನು ಮಾಡಿಕೊಂಡಿರುವ ಬಡಜನರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಒಕ್ಕಲೆಬ್ಬಿಸುತ್ತಿರುವುದನ್ನು ಕೂಡಲೇ ನಿಲ್ಲಿಸಲು ಖಡಕ್ ಆದೇಶ ಹೊರಡಿಸಲಾಗುವುದು. ಇದನ್ನು ಮೀರಿ ಯಾವುದೇ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ, ನಾನು ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

ವಸತಿ ಹಾಗೂ ಉಳುಮೆ ಭೂಮಿಯನ್ನು ಮಂಜೂರು ಮಾಡಲು ಫಾರಂ ನಂ. 50-53-57 ಹಾಗೂ 94 ಸಿ/ಸಿಸಿ ಮತ್ತು ಅರಣ್ಯ ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ತ್ವರಿತವಾಗಿ ಹಕ್ಕುಪತ್ರ ವಿತರಿಸುವುದು ಸೇರಿದಂತೆ ಈ ನಿಟ್ಟಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಮಂತ್ರಿಗಳು, ಹಿರಿಯ ಅಧಿಕಾರಿಗಳು ಹಾಗೂ ಹೋರಾಟ ಸಮಿತಿಯ ನಿಯೋಗವನ್ನು ಒಳಗೊಂಡು ಒಂದು ಉನ್ನತ ಮಟ್ಟದ ಸಭೆಯನ್ನು ಕರೆಯಬೇಕೆಂಬ ಒತ್ತಾಯವನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ.

ಸರಕಾರಿ ಹಾಗೂ ಖಾಸಗಿ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕಾರ್ಪೋರೇಟ್ ಕಂಪನಿಗಳಿಗೆ ಗುತ್ತಿಗೆ ನೀಡಬಾರದು. ಅದಕ್ಕಾಗಿ ತರಲು ಹೊರಟಿರುವ ಕಾಯ್ದೆಯನ್ನು ಕೈಬಿಡಬೇಕು ಎನ್ನುವ ನಮ್ಮ ಹಕ್ಕೊತ್ತಾಯವನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ದೊರೆಸ್ವಾಮಿ ಹೇಳಿದ್ದಾರೆ.

ನಿಯೋಗದಲ್ಲಿ ಹೋರಾಟ ಸಮಿತಿಯ ನೂರ್ ಶ್ರೀಧರ್, ಕುಮಾರ್ ಸಮತಳ, ಡಿ.ಎಚ್.ಪೂಜಾರ್, ಮರಿಯಪ್ಪ, ಸಿರಿಮನೆ ನಾಗರಾಜ್, ಪದ್ಮಾ ಕೆ. ರಾಜ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News