×
Ad

ರಾಜ್ಯದ ಎಲ್ಲ ಸರಕಾರಿ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರ: ಡಾ.ಅಶ್ವಥ್ ನಾರಾಯಣ

Update: 2020-02-11 17:48 IST

ಬೆಂಗಳೂರು, ಫೆ.11: ಕೌಶಲ್ಯಾಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ರಾಜ್ಯ ವ್ಯಾಪ್ತಿಯ ಸರಕಾರಿ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸಲಾಗುವುದೆಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಏರ್ಪಡಿಸಿದ್ದ ‘ಉದ್ಯೋಗದಾತರ ಅಗತ್ಯಕ್ಕನುಗುಣವಾಗಿ ಕೌಶಲ್ಯ ತರಬೇತಿ ನೀಡುವ ಬಗ್ಗೆ ಮತ್ತು ಮರು ಕೌಶಲ್ಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ, ಸ್ವಯಂ ವೃತ್ತಿಯ ತರಬೇತಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗಾಗಿ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ನೀಡಲಾಗುವುದು. ಸದ್ಯ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ, ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಶಾಲಾ ಮಟ್ಟದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯಮಶೀಲತೆ ಹೆಚ್ಚಿದಾಗ ಉದ್ಯೋಗಾವಕಾಶವೂ ಹೆಚ್ಚುವುದು, ಸದ್ಯ 9 ಸಾವಿರ ನವೋದ್ಯಮಗಳಿದ್ದು, ಮುಂದಿನ 2-3 ವರ್ಷಗಳಲ್ಲಿ ಈ ಸಂಖ್ಯೆ 20 ಸಾವಿರಕ್ಕೆ ಏರಲಿದೆ. ಅದಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಒದಗಿಸಲು ನಮ್ಮ ಸರಕಾರ ಬದ್ಧ ಎಂದು ಅವರು ತಿಳಿಸಿದರು.

ಯುವ ಜನರಿಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಆದ್ಯತೆ ನೀಡುವುದು. ಉದ್ಯೋಗಾವಕಾಶಗಳು ಸಾಕಷ್ಟಿವೆ. ಆದರೆ, ನಮ್ಮ ಯುವ ಜನರಿಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ ಎಂದ ಅವರು, ಉದ್ಯೋಗಕ್ಕಾಗಿ ಯಾರ ಕಾಲು ಹಿಡಿಯಬಾರದು. ಉದ್ಯೋಗದ ಮಾಹಿತಿ ಒಂದೇ ವೇದಿಕೆಯಡಿ ಸಿಗುವಂತಾಗಬೇಕು ಎಂದರು.

ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ ಮಾತನಾಡಿ, 5 ಟ್ರಿಲಿಯನ್ ಎಕಾನಮಿ ಸಾಧಿಸಲು ಹೆಚ್ಚಿನ ಕೈಗಾರಿಕೆಗಳು ಬರಬೇಕು. ಉದ್ಯೋಗ ಅವಕಾಶ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಬಹಳ ಮುಖ್ಯ ಎಂದರು.

ಉದ್ದಿಮೆಗಳಿಗೆ ಬೇಕಾದ ಮಾನವ ಸಂಪನ್ಮೂಲ ಒದಗಿಸಲು ಸೂಕ್ತ ತರಬೇತಿ ಅಗತ್ಯ. ಈ ನಿಟ್ಟಿನಲ್ಲಿ ಕೌಶಲ ತರಬೇತಿ ಕೇಂದ್ರಗಳ ಜತೆ ಕೈಗಾರಿಕೆಗಳು ಕೈ ಜೋಡಿಸಿದರೆ ಉತ್ತಮ. ಕಾರ್ಪೊರೇಟ್ ಕಂಪೆನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಐಟಿ-ಬಿಟಿ ವಲಯಗಳು ಉದ್ಯೋಗ ಸೃಷ್ಟಿಗೆ ಪೂರಕ ಕೌಶಲ್ಯ ತರಬೇತಿ ನೀಡಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಉದ್ಯೋಗ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ನಿರ್ದೇಶಕ ರಾಘವೇಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News