ದಿಲ್ಲಿ ಒಂದು ಕಾರ್ಪೊರೇಷನ್, ಅದು ರಾಜ್ಯ ಅಲ್ಲ: ಡಿಸಿಎಂ ಅಶ್ವಥ್ ನಾರಾಯಣ
ಬೆಂಗಳೂರು, ಫೆ.11: ಜನರಿಗೆ ಎಲ್ಲವೂ ಉಚಿತ ನೀಡಿದರೆ ಗೆಲುವು ಕಷ್ಟಕರ ಅಲ್ಲ. ಇನ್ನು, ದೆಹಲಿ ಎನ್ನುವುದು ನಮ್ಮ ಬಿಬಿಎಂಪಿ ಪಾಲಿಕೆಯಂತೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ವ್ಯಂಗ್ಯವಾಡಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ವಿಧಾನಸಭೆಯಲ್ಲಿ ಆಪ್ ಪಕ್ಷವೇ ಇರಬೇಕೆಂದು ಅಲ್ಲಿನ ಜನ ಬಯಸಿದ್ದಾರೆ. ಅಲ್ಲದೆ, ದೆಹಲಿ ಒಂದು ಕಾರ್ಪೊರೇಷನ್ ಇದ್ದಂತೆ. ಅದು ರಾಜ್ಯ ಎಂದು ಹೇಳುವುದಕ್ಕೆ ಆಗುವುದಿಲ್ಲ. ಜತೆಗೆ ವಿದ್ಯುತ್, ಸಾರಿಗೆ ಉಚಿತವಾಗಿಸಿದರೆ ಗೆಲ್ಲುವುದು ಕಷ್ಟವೇನು ಅಲ್ಲ ಎಂದು ಹೇಳಿದರು.
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಕರೆ ನೀಡಿರುವ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರಕಾರ ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದೆ. ಅದಕ್ಕಿಂತ ಮುಖ್ಯವಾಗಿ ನಾವು ಭಾರತೀಯರು ಎಂಬುದನ್ನು ಮರೆಯವಂತಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಕಾರಣ ನಮ್ಮ ಔದಾರ್ಯತೆ, ಎಲ್ಲರನ್ನು ಪ್ರೀತಿಯಿಂದ ಒಪ್ಪಿಕೊಳ್ಳುವ ಗುಣ. ಈ ವೈವಿಧ್ಯತೆಯನ್ನು ನಾವು ಉಳಿಸಿಕೊಳ್ಳಬೇಕು. ನಾವಿಂದು ವಿಶ್ವ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದ್ದು, ಈ ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡುವುದಲ್ಲ ಎಂದು ತಿಳಿಸಿದರು.