ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿಯನ್ನು ನಾವು ರಾಜ್ಯ ಪಕ್ಷಗಳಿಗೆ ವಹಿಸಿದ್ದೇವೆಯೇ ?

Update: 2020-02-12 09:21 GMT

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣ್ಣುಮುಕ್ಕಿಸಿ ಆಮ್ ಆದ್ಮಿ ಪಾರ್ಟಿ ಗಳಿಸಿದ ಜಯಭೇರಿಯನ್ನು ಹಲವು ಕಾಂಗ್ರೆಸ್ ನಾಯಕರು ಹಾಡಿ ಹೊಗಳುತ್ತಿರುವಂತೆಯೇ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಎಐಸಿಸಿ ರಾಷ್ಟ್ರೀಯ ವಕ್ತಾರೆ ಶರ್ಮಿಷ್ಠಾ ಮುಖರ್ಜಿ ನಾಯಕರತ್ತ ಛಾಟಿಯೇಟು ಬೀಸಿದ್ದಾರೆ.

"ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿಯನ್ನು ನಾವು ರಾಜ್ಯ ಪಕ್ಷಗಳಿಗೆ ವಹಿಸಿದ್ದೇವೆಯೇ?'' ಎಂಬ ಪ್ರಶ್ನೆಯನ್ನು ಅವರು ತಮ್ಮ ಪಕ್ಷ ನಾಯಕರಿಗೇ ಕೇಳಿದ್ದಾರೆ.

"ಹಾಗಿಲ್ಲದೇ ಇದ್ದರೆ ಪಕ್ಷದ ಹೀನಾಯ ಸೋಲಿನ ಬಗ್ಗೆ ಕಳವಳ ಹೊಂದುವ ಬದಲು ಆಪ್ ವಿಜಯದ ಬಗ್ಗೆಯೇ ಏಕೆ ಕೊಚ್ಚಿಕೊಳ್ಳುತ್ತಿದ್ದೇವೆ? ನನ್ನ ಪ್ರಶ್ನೆಗೆ ಉತ್ತರ ಹೌದು ಎಂದಾಗಿದ್ದರೆ ನಾವು (ಪ್ರದೇಶ ಕಾಂಗ್ರೆಸ್ ಸಮಿತಿ) ಬಾಗಿಲು ಮುಚ್ಚಬೇಕಾದೀತು,'' ಎಂದು ಮುಖರ್ಜಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ದಿಲ್ಲಿಯಲ್ಲಿ ಜಯಭೇರಿ ಬಾರಿಸಿದ ಆಮ್ ಆದ್ಮಿ ಪಾರ್ಟಿಯನ್ನು ಕೊಂಡಾಡಿ, ಹಿರಿಯ ನಾಯಕ ಪಿ ಚಿದಂಬರಂ ಮಾಡಿರುವ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ಶರ್ಮಿಷ್ಠಾ ಮುಖರ್ಜಿ ಮೇಲಿನಂತೆ ಹೇಳಿದ್ದಾರೆ.

"ಎಎಪಿ ವನ್, ಬ್ಲಫ್ ಎಂಡ್ ಬ್ಲಸ್ಟರ್ ಲಾಸ್ಟ್,'' ಎಂದು ಟ್ವೀಟ್ ಮಾಡಿದ್ದ ಚಿದಂಬರಂ, ದಿಲ್ಲಿಯ ಜನತೆ ಬಿಜೆಪಿಯ ವಿಭಜನಾತ್ಮಕ ಹಾಗೂ ದ್ವೇಷದ ಅಜೆಂಡಾವನ್ನು ಸೋಲಿಸಿದೆ ಎಂದಿದ್ದರು.

ಮಂಗಳವಾರ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯಿಸಿದ್ದ ಶರ್ಮಿಷ್ಠಾ "ನಾವು ಮತ್ತೊಮ್ಮೆ ದಿಲ್ಲಿಯಲ್ಲಿ ದಯನೀಯ ಸೋಲು ಕಂಡಿದ್ದೇವೆ. ಆತ್ಮಾವಲೋಕನ ಸಾಕು, ಇದು ಕಾರ್ಯೋನ್ಮುಖವಾಗಲು ಸಕಾಲ. ಉನ್ನತ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ವಿಳಂಬ, ರಾಜ್ಯ ಮಟ್ಟದಲ್ಲಿ ತಂತ್ರಗಾರಿಕೆ ಹಾಗೂ ಒಗ್ಗಟ್ಟಿನ ಕೊರತೆ, ಆತ್ಮಸ್ಥೈರ್ಯದ ಕೊರತೆ ಎದುರಿಸುತ್ತಿರುವ ಕಾರ್ಯಕರ್ತರು, ತಳ ಮಟ್ಟದಲ್ಲಿ ಸಂಪರ್ಕವಿಲ್ಲದೇ ಇರುವುದು ಎಲ್ಲವೂ ಸೋಲಿಗೆ ಕಾರಣ. ನಾನು ಕೂಡ ಸೋಲಿಗೆ ಜವಾಬ್ದಾರಿ ಹೊರುತ್ತೇನೆ,'' ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News