ಬೆಂಗಳೂರು ಮಹಾನಗರಕ್ಕೆ ವಿಶ್ವದರ್ಜೆ ಸೌಲಭ್ಯ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-02-12 12:52 GMT

ಬೆಂಗಳೂರು, ಫೆ.12: ರಾಜಧಾನಿ ಬೆಂಗಳೂರು ಸೇರಿದಂತೆ ಪ್ರತಿಯೊಂದು ನಗರಕ್ಕೂ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ನಗರಾಭಿವೃದ್ಧಿ ಇಲಾಖೆಯು ಗುಡ್ ಗವರ್ನೆನ್ಸ್ ಫೌಂಡೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ, ಮುನ್ಸಿಪಾಲಿಕಾ 16ನೆ ಅಂತರ್‌ರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಮಹಾನಗರಕ್ಕೆ ವಿಶ್ವದರ್ಜೆ ಸೌಲಭ್ಯಗಳನ್ನು ಒದಗಿಸುವುದರ ಜೊತೆ ಜೊತೆಗೆ, ರಾಜ್ಯದ ಉಳಿದ ನಗರಗಳ ಬೆಳವಣಿಗೆ ಕೂಡ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯ ಪ್ರವೃತ್ತವಾಗಿದೆ. ಇನ್ನು, ಪ್ರವಾಹ, ಭೂಕುಸಿತ, ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಸಂರಕ್ಷಿತ ನಗರಗಳನ್ನಾಗಿ ಯೋಜಿತ ರೀತಿಯಲ್ಲಿ ರೂಪಿಸುವ ಅಗತ್ಯವೂ ಇದೆ ಎಂದು ನುಡಿದರು.

ನಗರೀಕರಣ ದೊಡ್ಡ ಸವಾಲಾಗಿದ್ದು, ನಗರೀಕರಣದ ಜ್ವಲಂತ ಸಮಸ್ಯೆಗಳನ್ನು ಮತ್ತು ನಗರಗಳ ಯೋಜಿತ ಬೆಳವಣಿಗೆ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು 100 ಸ್ಮಾರ್ಟ್‌ಸಿಟಿ ಮಿಷನ್, 500 ಅಮೃತ್ ನಗರಗಳ ಮಿಷನ್, ಸ್ವಚ್ಛ ಭಾರತ ಮಿಷನ್, ಡಿಜಿಟಲ್ ಇಂಡಿಯಾ, ಇತ್ಯಾದಿ ಮಹತ್ವಾಕಾಂಕ್ಷಿ ಅಭಿಯಾನಗಳನ್ನು ಆರಂಭಿಸಿದ್ದು, ಇದನ್ನು ಯಶಸ್ವಿಗೊಳಿಸುವ ಜವಾಬ್ದಾರಿಯೂ ಇದೆ ಎಂದರು.

ಬೆಂಗಳೂರು ನಗರ ಸೇರಿ ರಾಜ್ಯದ 7 ಮಹಾನಗರ ಪಾಲಿಕೆಗಳು ಸ್ಮಾರ್ಟ್‌ಸಿಟಿ ಅಭಿಯಾನದಲ್ಲಿ, 27 ನಗರಗಳು ಅಮೃತ್ ಅಭಿಯಾನದಲ್ಲಿ ಹಾಗೂ ಸ್ವಚ್ಛ ಭಾರತ ಅಭಿಯಾನದಲ್ಲಿ ರಾಜ್ಯದ ಎಲ್ಲ ಪಟ್ಟಣಗಳು ಆಯ್ಕೆಯಾಗಿ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಉತ್ಪಾದನೆ ಮತ್ತು ವಾಣಿಜ್ಯ ದೃಷ್ಟಿಯಿಂದ ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳು ಮುಂಚೂಣಿ ಜಿಲ್ಲೆಗಳಾಗಿವೆ ಎಂದ ಅವರು, ಕ್ಷೀಣಿಸುತ್ತಿರುವ ಜಲ ಹಾಗೂ ಇಂಧನ ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಬಳಕೆಯಲ್ಲಿ ಮಿತವ್ಯಯ ಮತ್ತು ಸಂರಕ್ಷಣೆಯ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಶಾಸಕ ರಿಝ್ವಾನ್ ಅರ್ಶದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News