ಫೆ.16ಕ್ಕೆ ‘ಜಾನಪದ ಲೋಕ’ ಬೆಳ್ಳಿಹಬ್ಬ: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ

Update: 2020-02-12 12:49 GMT

ಬೆಂಗಳೂರು, ಫೆ.12: ನಾಡೋಜ ಎಚ್.ಎಲ್.ನಾಗೇಗೌಡರ ಕನಸಿನ ‘ಜಾನಪದ ಲೋಕ’ಕ್ಕೆ ಇಪ್ಪತ್ತೈದು ವರ್ಷ ತುಂಬುತ್ತಿದ್ದು, ಬೆಳ್ಳಿಹಬ್ಬದ ಸಂಭ್ರಮ. ಆ ಹಿನ್ನೆಲೆಯಲ್ಲಿ ಫೆ.16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿರುವ ಜಾನಪದ ಸಂಭ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ‘ಬೆಳ್ಳಿಹಬ್ಬದ ಲಾಂಚನ’ವನ್ನು ಅನಾವರಣ ಮಾಡಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರೂ ಹಾಗೂ ಜಾನಪದ ಪರಿಷತ್ತಿನ ಪ್ರಧಾನ ಪೋಷಕರು ಆದ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದರು.

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಮೆರವಣಿಗೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಡಾ.ಉದಯ ಗರುಡಾಚಾರ್ ವಹಿಸಲಿದ್ದು, ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೆ.17 ಮತ್ತು 18ರಂದು ರಾಮನಗರದ ಜಾನಪದ ಲೋಕದಲ್ಲಿ ಬೆಳ್ಳಿಹಬ್ಬದ ಪ್ರವಾಸಿ ಜಾನಪದ ಲೋಕೋತ್ಸವವನ್ನು ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಪ್ರೊ.ಹಂಪಾ ನಾಗರಾಜಯ್ಯ ಉದ್ಘಾಟಿಸಲಿದ್ದಾರೆ. ಜಾನಪದ ಸಂಭ್ರಮ ಮೇಳೈಸಲಿದೆ ಎಂದು ಅವರು ತಿಳಿಸಿದರು.

ಹೊಸ ಯೋಜನೆ: ರಾಜ್ಯದಲ್ಲಿ ಗುರುತಿಸದೆ ಇರುವ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪಾರಂಪರಿಕ ತಾಣಗಳಿದ್ದು ಅವುಗಳನ್ನು ಸಂರಕ್ಷಿಸಲು ಹೊಸ ಯೋಜನೆ ರೂಪಿಸಲಾಗುವುದು. ಈ ತಾಣಗಳನ್ನು ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲೆ ನಾಲ್ಕು ರಂಗ ಮಂದಿರ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಈ ಸಂಬಂಧ ಬಜೆಟ್ ಪೂರ್ವಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಿಎಂ ಯಡಿಯೂರಪ್ಪ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.

ಸಾವಿರ ಕೋಟಿ ರೂ.ಗೆ ಮನವಿ: ಪ್ರವಾಸೋದ್ಯಮ ಇಲಾಖೆಗೆ ಬಜೆಟ್‌ನಲ್ಲಿ 1,100 ಕೋಟಿ ರೂ.ನೀಡಲು ಮನವಿ ಮಾಡಿದ್ದು, ಸಿಎಂ ಕೈಗೊಳ್ಳುವ ನಿರ್ಧಾರವನ್ನು ಆಧರಿಸಿ ಮುಂದಿನ ದಿನಗಳಲ್ಲಿ ಇಲಾಖೆ ಯೋಜನೆಗಳನ್ನು ರೂಪಿಸಲಿದೆ ಎಂದು ರವಿ ತಿಳಿಸಿದರು.

ಎಲ್ಲರಿಗೂ ಪ್ರವಾಸ ಭಾಗ್ಯ: ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸೀಮಿತವಿದ್ದ ‘ಕರ್ನಾಟಕ ದರ್ಶನ’ ಪ್ರವಾಸ ಯೋಜನೆಯನ್ನು ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು. ಅಲ್ಲದೆ, ಎಂಟನೆ ತರಗತಿ ಜತೆಗೆ 9ನೆ ತರಗತಿ ವಿದ್ಯಾರ್ಥಿಗಳಿಗೆ ಈ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News