×
Ad

ಲಿಂಗಾಧಾರಿತ ಬಜೆಟ್ ನಿಂದ ಮಾತ್ರ ಮಹಿಳೆಯರಿಗೆ ಸೂಕ್ತ ಸೌಲಭ್ಯ: ಎನ್.ಭೃಂಗೀಶ್

Update: 2020-02-12 18:40 IST

ಬೆಂಗಳೂರು, ಫೆ.12: ಸರಕಾರಗಳು ಲಿಂಗಾಧಾರಿತ ಬಜೆಟ್ಅನ್ನು ಮಂಡಿಸಿದಾಗ ಮಾತ್ರ ಮಹಿಳೆಯರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸಾಧ್ಯವೆಂದು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎನ್.ಭೃಂಗಿಶ್ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ವಿಜಯಪುರ ಮಹಿಳಾ ವಿವಿ ಸಹಯೋಗದೊಂದಿಗೆ ಆಯೋಜಿಸಿದ್ದ, ’ಮಾಧ್ಯಮದಲ್ಲಿ ಮಹಿಳೆ ಹೊಸ ಸವಾಲುಗಳ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರ ವ್ಯಾಪ್ತಿಯೊಳಗೆ ಬರೋಬ್ಬರಿ 53 ಇಲಾಖೆಗಳಿದ್ದು, ಇದುವರೆಗೂ ವಾರ್ತಾ ಇಲಾಖೆ ಹೊರತು ಪಡಿಸಿ ಹಲವು ಇಲಾಖೆಯಲ್ಲಿ ಲಿಂಗಾಧಾರಿತ ಬಜೆಟ್ ಮೂಡಿ ಬಂದಿಲ್ಲ. ಅಲ್ಲದೆ, ಶೇ.33 ಪ್ರಮಾಣದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕೆಂದು ಯೋಜನಾ ಮತ್ತು ನೀತಿ ಆಯೋಗ ಹೇಳಿದೆ ಎಂದು ಅವರು ತಿಳಿಸಿದರು.

ಮಾಧ್ಯಮ ಸೇರಿ ಬೇರೆ ಕ್ಷೇತ್ರದಲ್ಲಿ ಮಹಿಳೆಯರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ, ಪ್ರಮುಖವಾಗಿ ಲೈಂಗಿಕ ಕಿರುಕುಳ ಸೇರಿ ಇನ್ನಿತರ ಗಂಭೀರ ಆರೋಪ ಕೇಳಿ ಬಂದಾಗ ಸರಕಾರಿ ಕಚೇರಿ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂದು ಕಾನೂನು ಇದೆ. ಆದರೆ, ಇದು ಪರಿಣಾಮಕಾರಿಯಾಗಿ ಜರಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸ್ಥಾನಿಕ ಸಂಪಾದಕಿ ಸಾಂತ್ವನಾ ಭಟ್ಟಾಚಾರ್ಯ ಮಾತನಾಡಿ, ರಾಷ್ಟ್ರೀಯ ಮಾಧ್ಯಮಗಳಲ್ಲಿರುವಂತೆ ಪ್ರಾದೇಶಿಕ ಮಾಧ್ಯಮಗಳಲ್ಲಿಯೂ ಮಹಿಳಾ ಪತ್ರಕರ್ತೆಯರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ, ತಳಮಟ್ಟದ ಶೋಷಣೆ ಬಯಲಿಗೆ ಎಳೆಯಲು ಸಾಧ್ಯ. ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪತ್ರಕರ್ತೆಯರು ಇರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.

ಹಿರಿಯ ಪತ್ರಕರ್ತೆ ಡಾ.ವಿಜಯಾ ಮಾತನಾಡಿ, ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಸರಿಯಾದ ಶ್ರೇಣಿ ಹಾಗೂ ಉತ್ತಮ ಸಂಬಳ ಸಿಗುತ್ತಿಲ್ಲ. ಜತೆಗೆ ಮಹಿಳೆಯರಿಗೆ ಮಾಧ್ಯಮದಲ್ಲಿ ಅನಿಶ್ಚಿಯತೆ ಯಾವಾಗಲೂ ಕಾಡುತ್ತಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾಧ್ಯಮದಲ್ಲಿ ತಂತ್ರಜ್ಞಾನಾಧಾರಿತವಾಗಿ ಬದಲಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇದರೊಂದಿಗೆ ಮಹಿಳಾ ಪತ್ರಕರ್ತೆಯರು ಕ್ರಿಯಾಶೀಲರಾಗುತ್ತಾ ಹೋಗಬೇಕು. ಏನೇ ಸಮಸ್ಯೆ ಬಂದರೂ ಅದೆಲ್ಲವನ್ನು ಮೀರಿ ವೃತ್ತಿಯಲ್ಲಿ ಸಾಧಕರಾಗಿ ಯುವ ಜನತೆಗೆ ಮಾದರಿಯಾಗಬೇಕೆಂದು ಅವರು ಆಶಿಸಿದರು. ಮುದ್ರಣ ಮಾಧ್ಯಮ ಹೆಚ್ಚೆಂದರೆ ಇನ್ನು ಏಳೆಂಟು ವರ್ಷ ಚಾಲ್ತಿಯಲ್ಲಿರಬಹುದು. ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳು ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಸಿಗಬಹುದು ಎಂಬುದನ್ನು ಬಿಟ್ಟು ಹೊಸ ಹೊಸ ರೀತಿಯ ಪ್ರಯತ್ನಗಳಿಗೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕ್ಯಾಪ್ಟನ್ ಪಿ.ಮಣಿವಣ್ಣನ್, ವಾರ್ತಾ ಇಲಾಖೆಯ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News