ಬಂದ್ ಕೈ ಬಿಟ್ಟು ಮಾತುಕತೆಗೆ ಬನ್ನಿ: ಸಿಎಂ ಯಡಿಯೂರಪ್ಪ

Update: 2020-02-12 14:31 GMT

ಬೆಂಗಳೂರು, ಫೆ.12: ಕನ್ನಡರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಅಗತ್ಯವಿರುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡರುವ ರಾಜ್ಯ ಬಂದ್ ಕೈಬಿಟ್ಟು, ಮಾತುಕತೆ ಬರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮ ಕೈಗೊಂಡಿದ್ದೇನೆ. ಈ ಬಗ್ಗೆ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಹೀಗಾಗಿ ರಾಜ್ಯ ಬಂದ್ ಮಾಡುವ ಮೂಲಕ ಸಾರ್ವಜನಿಕರಿಗೆ ಅನಗತ್ಯ ಸಮಸ್ಯೆಯನ್ನು ಉಂಟು ಮಾಡುವುದು ಸರಿಯಲ್ಲವೆಂದು ತಿಳಿಸಿದರು.

ನಾನು ಕನ್ನಡ ಪರ ಇರುವವನೇ. ಕನ್ನಡ ನಾಡು, ನುಡಿಯ ರಕ್ಷಣೆಯೇ ನಮ್ಮ ಆದ್ಯತೆಯ ವಿಷಯವಾಗಿದೆ. ಇದರಲ್ಲಿ ರಾಜೀ ಆಗುವ ಪ್ರಶ್ನೆಯೇ ಇಲ್ಲ. ಹೀಗಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ. ರಾಜ್ಯ ಬಂದ್‌ನಿಂದ ಯಾವುದೇ ಪ್ರಯೋಜನವಾಗುವುದಿಲ್ಲವೆಂದು ಅವರು ತಿಳಿಸಿದರು.

ಸರೋಜಿನಿ ಮಹಿಷಿ ವಿಷಯದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳು ಒಟ್ಟಾಗಿ ಕೂತು ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರೋಣ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ಹೀಗಾಗಿ ರಾಜ್ಯ ಬಂದ್‌ಗೆ ಕಾಂಗ್ರೆಸ್ ಬೆಂಬಲ ನೀಡಿರುವುದು ಸರಿಯಲ್ಲವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News