ಹಿಟ್ ಅಂಡ್ ರನ್ ಪ್ರಕರಣ: ವಿಚಾರಣೆಗೆ ಹಾಜರಾದ ಮುಹಮ್ಮದ್ ನಲಪಾಡ್

Update: 2020-02-12 16:24 GMT

ಬೆಂಗಳೂರು, ಫೆ.12: ಗುದ್ದೋಡು(ಹಿಟ್ ಅಂಡ್ ರನ್) ಆರೋಪ ಪ್ರಕರಣ ಸಂಬಂಧ ಇಲ್ಲಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಗೆ ಶಾಂತಿನಗರ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ವಿಚಾರಣೆಗೆ ಹಾಜರಾದರು.

ಬುಧವಾರ ಪ್ರಕರಣದ ತನಿಖಾಧಿಕಾರಿ ಬಿ.ಪಿ.ನಾಗರಾಜು ನೇತೃತ್ವದ ತಂಡ ಮುಹಮ್ಮದ್ ನಲಪಾಡ್ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡರು.

ಈ ಕುರಿತು ಸುದ್ದಿಗಾರರೊಂದಿಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ನಲಪಾಡ್ ಅವರನ್ನು ಬಂಧಿಸಿ, ಬಾಂಡ್ ಬರೆಸಿಕೊಂಡು ಠಾಣಾ ಜಾಮೀನು (ಸ್ಟೇಷನ್ ಬೇಲ್) ನೀಡಿದ್ದೇವೆ ಎಂದು ತಿಳಿಸಿದರು.

ಮೇಖ್ರಿ ವೃತ್ತದ ಕೆಳ ಸೇತುವೆಯಲ್ಲಿ ರವಿವಾರ(ಫೆ.9) ಮಧ್ಯಾಹ್ನ 2:30 ಗಂಟೆ ಸುಮಾರಿಗೆ ದುಬಾರಿ ಬೆಲೆಯ ಕಾರೊಂದು ಬೈಕ್‌ಗೆ ಗುದ್ದಿ, ನಂತರ ಆಟೊಗೆ ಢಿಕ್ಕಿ ಹೊಡೆದಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಹಾಗಾಗಿ, ಬುಧವಾರ ಠಾಣೆಗೆ ನಲಪಾಡ್ ಬಂದಿದ್ದಾರೆ ಎಂದರು.

‘ನಲಪಾಡ್ ಕಾರು ಚಲಾಯಿಸಿಲ್ಲ’

ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ನಲಪಾಡ್ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಅಲ್ಲದೆ, ನಲಪಾಡ್ ಕಾರು ಚಲಾಯಿಸಿಲ್ಲ, ಬೇರೊಬ್ಬ ವ್ಯಕ್ತಿ ಬಾಲು ಎಂಬುವರು ಕಾರು ಚಲಾಯಿಸಿದ್ದಾರೆ. ಯಾರೋ ದುರುದ್ದೇಶದಿಂದ ಹೀಗೆ ಷಡ್ಯಂತ್ರ ಮಾಡಿದ್ದಾರೆ.

-ಪಿ.ಉಸ್ಮಾನ್, ನಲಪಾಡ್ ಪರ ವಕೀಲ

ಕೈಮುಗಿಯುತ್ತೇನೆ, ಬಿಟ್ಟುಬಿಡಿ ಎಂದು ಕಣ್ಣೀರು ಹಾಕಿದ ನಲಪಾಡ್

ಹಳೇ ಘಟನೆಯಿಂದ(ವಿದ್ವತ್ ಮೇಲೆ ಹಲ್ಲೆ) ಭಾರೀ ನೊಂದಿದ್ದೇನೆ. ಇದೀಗ ನನ್ನ ತಪ್ಪುಗಳು ಇಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಇದನ್ನು, ಇಲ್ಲಿಗೆ ಕೈಬಿಡಿ ಎಂದು ಮುಹಮ್ಮದ್ ನಲಪಾಡ್ ಕಣ್ಣೀರು ಹಾಕಿದರು.

ಬುಧವಾರ ಪೊಲೀಸ್ ಠಾಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಖ್ರಿ ವೃತ್ತದಲ್ಲಿ ನಡೆದ ಸರಣಿ ಅಪಘಾತವನ್ನು ನಾನು ಮಾಡಿಲ್ಲ. ನಾನು ಕಾರಿನಲ್ಲಿ ಇದ್ದಿದ್ದು ನಿಜ. ಆದರೆ, ಕಾರು ಚಲಾಯಿಸಿದ್ದು ನನ್ನ ಚಾಲಕ ಬಾಲು. ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗಿದೆ ಎಂದು ಹೇಳಿದರು.

ಆ ಒಂದು ಘಟನೆ (ವಿದ್ವತ್ ಹಲ್ಲೆ ಪ್ರಕರಣ) ಬಳಿಕ ಸಾಕಷ್ಟು ಬದಲಾಗಿದ್ದೇನೆ ಎಂದ ಅವರು, ಕಾರು ಅಪಘಾತ ನಿಜ. ಹಾಗಂತ ಯಾರು ಅಪಘಾತ ಮಾಡುವುದಿಲ್ಲವೇ. ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ಅಪಘಾತ ಆಗಿದೆಯೇ ಎಂದ ಅವರು, ನಿಮಗೆ ಕೈಮುಗಿಯುತ್ತೇನೆ ನನ್ನು ಬಿಟ್ಟು ಬಿಡಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News