ಬಂದ್‌ಗೆ ಅನುಮತಿ ನೀಡಿಲ್ಲ, ಅಹಿತಕರ ಘಟನೆಗಳು ನಡೆದರೆ ಕಠಿಣ ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತ ಎಚ್ಚರಿಕೆ

Update: 2020-02-12 14:48 GMT

ಬೆಂಗಳೂರು, ಫೆ.12: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟ ನಾಳೆ(ಫೆ.13) ಕರೆ ನೀಡಿರುವ ಬಂದ್ ವೇಳೆ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯ(ಫೆ.13) ಬಂದ್‌ಗೆ ಅನುಮತಿ ನೀಡಿಲ್ಲ. ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ ಬಂದ್ ಆಯೋಜಕರನ್ನೇ ಹೊಣೆ ಮಾಡಲಾಗುತ್ತದೆ. ಆಯೋಜಕರ ಪಟ್ಟಿ ತಮ್ಮ ಬಳಿಯಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ರಾಜ್ಯ ಬಂದ್ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನೆ, ರ‍್ಯಾಲಿಗೆ ಅವಕಾಶವಿಲ್ಲ. ಒಂದು ವೇಳೆ ಮೆರವಣಿಗೆ ನಡೆಸಬೇಕಿದ್ದಲ್ಲಿ, ದಕ್ಷಿಣ ವಲಯ ವ್ಯಾಪ್ತಿಯ ಎಸಿಪಿ, ಡಿಸಿಪಿ ಅವರಿಂದ ಅನುಮತಿ ಪಡೆದು ಸಿಟಿ ರೈಲ್ವೆ ಸ್ಟೇಷನ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆಗಷ್ಟೇ ಅವಕಾಶ ಕಲ್ಪಿಸಲಾಗುವುದು. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲು ಅನುಮತಿಯಿಲ್ಲ ಎಂದು ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಬಂದ್‌ಗೆ ನನ್ನ ಬೆಂಬಲವಿಲ್ಲ...

ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಾನು ಬೆಂಬಲ ನೀಡುವುದಿಲ್ಲ. ವರದಿ ಜಾರಿಗೆ ಪೂರಕ ಸಮಿತಿ ರಚನೆ ಮಾಡುವ ವೇಳೆ ನಾನಿದ್ದೆ. ಸರೋಜಿನಿ ಮಹಿಷಿಯವರನ್ನು ನೇಮಿಸಿದ್ದೇ ನಾನು. ಇವತ್ತು ಹೋರಾಟ ಮಾಡುತ್ತಿರುವವರಿಗೆ ಇತಿಹಾಸ ಗೊತ್ತಿಲ್ಲ. ಈ ವರದಿ ಜಾರಿಗೆ ಆಗ್ರಹಿಸಿ ಮಾ.5ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇನೆ.

-ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ

ನೈತಿಕ ಬೆಂಬಲ

ರಾಜ್ಯ ಬಂದ್‌ಗೆ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ಘೋಷಿಸಿವೆ.

ರಾಜ್ಯ ಸರಕಾರಿ ನೌಕರರ ಸಂಘವು ನಾಡು, ನುಡಿ, ನೆಲ, ಜಲ, ಗಡಿ ಹಾಗೂ ಸಂಸ್ಕೃತಿ ರಕ್ಷಣೆಯಲ್ಲಿ ಬದ್ದತೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಹಮ್ಮಿಕೊಳ್ಳುವ ಹೋರಾಟಗಳಿಗೆ ನೈತಿಕ ಬೆಂಬಲ ನೀಡುತ್ತಾ ಬಂದಿದ್ದೇವೆ. ಅದೇ ಮಾದರಿಯಲ್ಲೇ ಸರೋಜಿನಿ ಮಹಿಷಿ ವರದಿ ಜಾರಿಗೆ ಅಗ್ರಹಿಸಿ ನಡೆಸುತ್ತಿರುವ ರಾಜ್ಯ ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ರಾಜ್ಯ ಬಂದ್‌ಗೆ ನೈತಿಕ ಬೆಂಬಲ ನೀಡುತ್ತಿದೆ. ಆದರೆ, ಸಿನೆಮಾ ಪ್ರದರ್ಶನಗಳು ಎಂದಿನಂತೆ ನಡೆಯಲಿವೆ. ಹಾಗೂ ಸಿನೆಮಾ ಕಾರ್ಯಚಟುವಟಿಕೆಗಳಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News