ಬಜೆಟ್‌ನಲ್ಲಿ ಸಂಪೂರ್ಣ ಸಾಲ ಮನ್ನಾ ಘೋಷಣೆಗೆ ರೈತ ಸಂಘ ಆಗ್ರಹ

Update: 2020-02-13 13:27 GMT

ಬೆಂಗಳೂರು, ಫೆ.13: ಮುಂದಿನ ಬಜೆಟ್‌ನಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಗುರುವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯ ಜನ್ಮದಿನೋತ್ಸವ ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ನಮ್ಮ ಬೇಡಿಕೆಗಳನ್ನು ಮುಂದಿನ ಬಜೆಟ್‌ನಲ್ಲಿ ಸೇರಿಸಿಕೊಳ್ಳುವಂತೆ ಮನವಿ ಮಾಡಲಾಯಿತು.

ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿರುವ ನ್ಯೂನತೆಗಳು ಸರಿಪಡಿಸಬೇಕು. ಕೃಷಿ ಪರಿಕರಗಳಿಗೆ ಶೇ.90 ರಷ್ಟು ಕಡಿಮೆಯಿಲ್ಲದಂತೆ ಜಾರಿಗೆ ತರಬೇಕು. ರಾಜ್ಯದ ಎಲ್ಲ ಕೆರೆಗಳಲ್ಲಿ ಹೂಳೆತ್ತಲು ಕ್ರಮ ವಹಿಸಬೇಕು. ಪಂಚಾಯತ್ ಮಟ್ಟದಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು.

60 ವರ್ಷ ವಯಸ್ಸಾದ ರೈತರಿಗೆ ಮಾಸಿಕ ಐದು ಸಾವಿರ ಮಾಶಾಸನ ನೀಡಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ಪಾಳು ಬಿದ್ದಿರುವ ನೀರಾವರಿ ಯೋಜನೆಗಳನ್ನು ಪುನರ್ ಆರಂಭಿಸಬೇಕು. ಸರಕಾರಿ ಕಚೇರಿಗಳಲ್ಲಿ ಲಂಚಮುಕ್ತವಾಗಿಸಲು ಕ್ರಮ ವಹಿಸಬೇಕು. ಶಾಶ್ವತ ಬರ ನಿರ್ವಹಣೆಗಾಗಿ ದೀರ್ಘಕಾಲದ ಯೋಜನೆ ರೂಪಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತ ಸಂಘ ಈ ಸಂದರ್ಭದಲ್ಲಿ ನೀಡಿರುವ ಎಲ್ಲ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಅಲ್ಲದೆ, ಇವೆಲ್ಲವೂ ರೈತರಿಗೆ ಪೂರಕವಾದ ಬೇಡಿಕೆಗಳಾಗಿದೆ. ಮುಂದಿನ ತಿಂಗಳಿನಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಇವುಗಳನ್ನು ಸೇರ್ಪಡೆ ಕುರಿತು, ಮುಖ್ಯಮಂತ್ರಿ ಯಡಿಯೂರಪ್ಪರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, 70ರ ಕೊನೆ 80ರ ಆರಂಭದ ದಶಕದಲ್ಲಿ ರಾಜ್ಯವಷ್ಟೇ ಅಲ್ಲದೆ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ರೈತ ನಾಯಕರಾಗಿ ಗುರುತಿಸಿಕೊಂಡ ವ್ಯಕ್ತಿ ನಂಜುಂಡಸ್ವಾಮಿ. ಏಕ ವ್ಯಕ್ತಿ ನಾಯಕತ್ವದ ಬದಲಿಗೆ, ಸಾಮೂಹಿಕ ನಾಯಕತ್ವದ ಪರಿಕಲ್ಪನೆ ನೀಡಿದ್ದ ನಾಯಕ ಅವರಾಗಿದ್ದಾರೆ ಎಂದರು.

2019-20 ನೇ ಸಾಲಿನಲ್ಲಿ ಮತ್ತೊಮ್ಮೆ 70-80 ರ ದಶಕದ ಹೋರಾಟವು ಮರುಸೃಷ್ಟಿಗೊಂಡಿದೆ. ಕೇಂದ್ರ ಸರಕಾರದ ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಹೋರಾಟವು ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಸಾಗುತ್ತಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಮಾಜಿ ಅಡ್ವಕೇಟ್ ಜನರಲ್ ರವಿವರ್ಮ ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖ್ಯಸ್ಥೆ ಚುಕ್ಕಿ ನಂಜುಂಡಸ್ವಾಮಿ, ರೈತ ಮುಖಂಡ ಕೆ.ಟಿ.ಗಂಗಾಧರ್, ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಹಾಗೂ ಚಿಂತಕ ಶಿವಸುಂದರ್ ಸೇರಿದಂತೆ ಮತ್ತಿತರಿದ್ದರು. ಇದೇ ವೇಳೆ ಬೇರು ಬೆವರು ಕಲಾ ಬಳಗದಿಂದ ರೈತ ಗೀತೆಗಳನ್ನು ಹಾಡಲಾಯಿತು.

ಕೇಂದ್ರ ಸರಕಾರ ತರಲು ಮುಂದಾಗಿರುವ ಬಿತ್ತನೆ ಬೀಜ ಮಸೂದೆಯು ಕಾರ್ಪೋರೇಟ್ ಕಂಪೆನಿಗಳ ಪರವಾಗಿದೆ. ಬಿತ್ತನೆ ಬೀಜಗಳಿಗೆ ತಾವೇ ಬೆಲೆ ನಿಗದಿಪಡಿಸಬಹುದಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಪಡುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ಶೇ.1 ರಷ್ಟು ಜನತೆ ಕೃಷಿಕರಾಗಿದ್ದು, ಕಂಪನಿಗಳೇ ಕೃಷಿ ಚಟುವಟಿಕೆಯನ್ನು ಮುನ್ನಡೆಸುತ್ತಿವೆ. ಬೀಜ ಮಸೂದೆಯಿಂದ ಇಲ್ಲಿಯೂ ಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ದಾರಿಯಾಗಲಿದೆ.

-ಯುದ್ಧ ವೀರ ಸಿಂಗ್, ಅಖಿಲ ಭಾರತ ರೈತ ಸಂಘಟನೆಗಳ ರಾಷ್ಟ್ರೀಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News