ಹಣ ದುರುಪಯೋಗ ಆರೋಪ: ಬಿಬಿಎಂಪಿಯ ಮೂವರು ಅಧಿಕಾರಿಗಳು ಅಮಾನತು

Update: 2020-02-13 13:29 GMT

ಬೆಂಗಳೂರು, ಫೆ.13: ಬಿಬಿಎಂಪಿಯ ಕಾಮಗಾರಿ ಬಿಲ್‌ಗಳ ಪಾವತಿ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತರನ್ನೇ ದಿಕ್ಕು ತಪ್ಪಿಸಿ ಯೋಜಿತವಾಗಿ ಹಣವನ್ನು ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೆಕ್ಕ ಅಧಿಕಾರಿ ಅನಿತಾ, ಲೆಕ್ಕ ಅಧೀಕ್ಷಕ ರಾಮಮೂರ್ತಿ ಹಾಗೂ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಅವರನ್ನು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರು ಅಮಾನತು ಮಾಡಿದ್ದಾರೆ. ಜೊತೆಗೆ, ಈ ಮೂವರ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಬಿಬಿಎಂಪಿಯಲ್ಲಿ 4 ಕೋಟಿ ರೂ. ಕಾಮಗಾರಿಯ ಟೆಂಡರ್ ಪಡೆದಿದ್ದ ಚಂದ್ರಪ್ಪ ಎಂಬ ಗುತ್ತಿಗೆದಾರ ಅವಧಿಯೊಳಗೆ ಕೆಲಸ ಪೂರ್ಣಗೊಳಿಸಿದ್ದಾರೆ. ಪಾಲಿಕೆಯಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ ಸೀನಿಯಾರಿಟಿ ಆಧಾರದ ಮೇಲೆ 6 ತಿಂಗಳು ಅಥವಾ 1 ವರ್ಷಕ್ಕೆ ಬಿಲ್ ಬಿಡುಗಡೆ ಮಾಡುವ ಪದ್ಧತಿ ಇದೆ. ಹೀಗಾಗಿ ಗುತ್ತಿಗೆದಾರ ಚಂದ್ರಪ್ಪ ತನ್ನ ಸೀನಿಯಾರಿಟಿ ಬರುವವರೆಗೆ ಕಾಯುತ್ತಾ ಸುಮ್ಮನಾಗಿದ್ದರು. ನಂತರ ತನ್ನ ಸೀನಿಯಾರಿಟಿ ಹತ್ತಿರ ಬಂದಾಗ ಬಿಬಿಎಂಪಿಗೆ ಬಂದು ಬಿಲ್ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಈಗಾಗಲೇ 4 ತಿಂಗಳ ಹಿಂದಿಯೇ 4 ಕೋಟಿ ರೂ. ಹಣ ಬಿಡುಗಡೆ ಆಗಿರುವುದಾಗಿ ತಿಳಿಸಿದ್ದಾರೆ.

ನಂತರ ಗುತ್ತಿಗೆದಾರ ಚಂದ್ರಪ್ಪ ಅಧಿಕಾರಿಗಳ ಬಳಿ ಗಲಾಟೆ ಮಾಡಿ, ಪರಿಶೀಲನೆ ನಡೆಸಿದಾಗ ನಕಲಿಗಳ ಕರಾಮತ್ತು ಬೆಳಕಿಗೆ ಬಂದಿದೆ. ಚಂದ್ರಪ್ಪ ಅವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್ ತೆರೆದು, ಚಂದ್ರಪ್ಪರಂತೆಯೇ ಸಹಿ ಮಾಡಲಾಗಿದೆ. ಬಳಿಕ ಬಿಬಿಎಂಪಿ ಆಯುಕ್ತರಿಂದ ಸಹಿ ಮಾಡಿಸಿ 4 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಖಾತೆಗೆ ಹಣ ವರ್ಗಾವಣೆಯಾದ ಕೆಲವೇ ನಿಮಿಷಗಳಲ್ಲಿ ಅಷ್ಟೂ ಹಣವನ್ನು ಡ್ರಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News