ಸೋತವರು ಸಚಿವ ಸ್ಥಾನ ಪಡೆಯಬಹುದು: ಎಂಟಿಬಿ ನಾಗರಾಜ್

Update: 2020-02-13 13:31 GMT

ಬೆಂಗಳೂರು, ಫೆ.13: ಉಪ ಚುನಾವಣೆಯಲ್ಲಿ ಸೋತಿರುವವರು ಸಚಿವ ಸ್ಥಾನ ಸೇರಿದಂತೆ ಯಾವ ಹುದ್ದೆ ಬೇಕಾದರೂ ಪಡೆಯಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಗುರುವಾರ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಹೇಳುತ್ತಿದ್ದರು. ಈ ಸಂಬಂಧ ನಾನು ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದಿದ್ದೇನೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಒಮ್ಮೆ ನಾಮಪತ್ರ ಸಲ್ಲಿಸಿ, ಅದು ಸ್ವೀಕಾರಗೊಂಡ ಬಳಿಕ ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ ನಮ್ಮ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ರದ್ದಾಗುತ್ತದೆ. ಆನಂತರ ಯಾವ ಹುದ್ದೆ ಬೇಕಾದರೂ ಪಡೆಯಬಹುದು ಎಂದು ಕಾನೂನು ತಜ್ಞರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಕಾನೂನು ತಜ್ಞರು ಕೊಟ್ಟಿರುವ ಅಭಿಪ್ರಾಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗಮನಕ್ಕೆ ತಂದಿದ್ದೇನೆ. ಈ ಸಂಬಂಧ ಪರಿಶೀಲಿಸೋಣ ಎಂದು ಅವರು ಹೇಳಿದ್ದಾರೆ. ನಾನು ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಕೊಟ್ಟರೆ ಸಾಕು ಅನ್ನೋ ಹಂತಕ್ಕೆ ಬಂದಿಲ್ಲ. ನನಗೆ ಸಚಿವ ಸ್ಥಾನವೇ ಬೇಕು ಎಂಬ ಶರತ್ತು ವಿಧಿಸಿ ಬಿಜೆಪಿ ಬಂದಿಲ್ಲ. ಮೈತ್ರಿ ಸರಕಾರದ ಆಡಳಿತ ವೈಖರಿಯಿಂದ ಬೇಸತ್ತು ಬಿಜೆಪಿಗೆ ಬಂದಿದ್ದೇನೆ ಎಂದು ನಾಗರಾಜ್ ತಿಳಿಸಿದರು.

ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷ ಹೊಸಕೋಟೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದೇ ಠೇವಣಿ ಕಳೆದುಕೊಂಡಿದೆ. ಹೊಸಕೋಟೆ ಗೆಲುವಿನ ಬಗ್ಗೆ ಮುಖ್ಯಮಂತ್ರಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

ವಿಧಾನಸಭೆ ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣವಾಗಿರುವ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಂಡು, ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಮತ್ತೊಮ್ಮೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಪಕ್ಷದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಮಾಡಿರುವ ಆಗ್ರಹಕ್ಕೆ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಾಗರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News