ಡಿ.18ರಂದು ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ ಕಾನೂನು ಬಾಹಿರ: ಹೈಕೋರ್ಟ್
ಬೆಂಗಳೂರು, ಫೆ.13: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುವ ವೇಳೆ ನಗರ ಪೊಲೀಸ್ ಆಯುಕ್ತರು 2019ರ ಡಿ.18ರಂದು ಬೆಂಗಳೂರಿನಲ್ಲಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಹೊರಡಿಸಿದ್ದ ಆದೇಶ ಕಾನೂನು ಬದ್ಧವಾಗಿಲ್ಲ ಹಾಗೂ ಕಾನೂನು ಬಾಹಿರವಾಗಿದೆ ಎಂದು ಹೈಕೋರ್ಟ್ ನಗರ ಪೊಲೀಸ್ ಆಯುಕ್ತರ ಆದೇಶವನ್ನು ರದ್ದುಗೊಳಿಸಿದೆ.
ಈ ಕುರಿತು ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ಪ್ರಶ್ನಿಸಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಪಿಯುಸಿಎಲ್ ಸಂಘಟನೆ, ಕವಿತಾ ಲಂಕೇಶ್, ಲಿಯೋ ಸಾಲ್ಡಾನಾ, ಅಶ್ವಿನಿ ಓಬಳೇಶ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತೇವೆ ಎಂದಾಗ ಸಂಘಟನೆಯವರಿಗೆ ಅನುಮತಿ ನೀಡಿದ್ದೀರಿ. ಡಿಸಿಪಿಗಳ ವರದಿ ಆಧರಿಸಿ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದೀರಿ. ಆದರೆ, ವರದಿ ಬಗ್ಗೆ ಸೂಕ್ತ ವಿಚಾರಣೆ ನಡೆಸಿಲ್ಲ ಎಂದು ತಿಳಿಸಿದ ನ್ಯಾಯಪೀಠವು ನಗರ ಪೊಲೀಸ್ ಆಯುಕ್ತರ ಆದೇಶವನ್ನು ರದ್ದುಗೊಳಿಸಿತು.
ಡಿಸಿಪಿ ಹಾಗೂ ಡಿಜಿ ಅವರ ಪತ್ರವನ್ನು ಆಧರಿಸಿ ನಿಷೇಧಾಜ್ಞೆ ಜಾರಿಗೊಳಿಸುವ ಮುನ್ನ ನಗರ ಪೊಲೀಸ್ ಆಯುಕ್ತರು ಜಿಲ್ಲಾ ಮ್ಯಾಜಿಸ್ಟ್ರೇಟ್ ರೀತಿಯಲ್ಲಿ ಯೋಚನೆ ಮಾಡಿ, ಸೂಕ್ತ ವಿಚಾರಣೆ ನಡೆಸಬೇಕು. ಆದರೆ, ಯಾವುದೇ ವಿಚಾರಣೆ ನಡೆಸದೆ, ಸರಿಯಾದ ಕಾರಣವನ್ನು ನೀಡದೆ ಸೆಕ್ಷನ್ 144 ಜಾರಿಗೊಳಿಸಿದ್ದರಿಂದ ನಾಗರಿಕರ ಮೂಲಭೂತ ಹಕ್ಕುಗಳಲ್ಲಿ ಒಂದಾದ ಪ್ರತಿಭಟನೆಯ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಅಭಿಪ್ರಾಯಪಟ್ಟಿತು.
ಇದಕ್ಕೆ ಮೊದಲು ಅರ್ಜಿದಾರರ ಪರ ವಾದಿಸಿದ ಮಾಜಿ ಅಡ್ವಕೇಟ್ ಜನರಲ್ ರವಿವರ್ಮ ಕುಮಾರ್ ಅವರು, ಸಿಎಎ ವಿರೋಧಿ ಪ್ರತಿಭಟನೆ ಮಾಡುತ್ತೇವೆ ಎಂದಾಗ ಪೊಲೀಸರು ಆಯೋಜಕರಿಂದ ಬಾಂಡ್ ಬರೆಸಿಕೊಳ್ಳುತ್ತಿದ್ದು, ಕರ್ನಾಟಕ ರಾಜ್ಯ ಪೊಲೀಸ್ ರಾಜ್ಯವಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಸಿಎಎ ವಿರುದ್ಧ ಪ್ರತಿಭಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳಿಂದಾಗಿ ದಿಢೀರ್ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರು ಸೂಕ್ಷ್ಮ ಪ್ರದೇಶಗಳಲ್ಲಿರುವ ನಗರವಾಗಿದೆ. ಹೀಗಾಗಿ, ಸೆಕ್ಷನ್ 144 ಜಾರಿಗೊಳಿಸಲಾಯಿತು ಎಂದು ಪೀಠಕ್ಕೆ ತಿಳಿಸಿದರು.