ಬಿಸಿಯೂಟ ನೌಕರರ ಬೇಡಿಕೆ ಸಂಬಂಧ ಸದ್ಯದಲ್ಲೇ ದಿಲ್ಲಿಗೆ ನಿಯೋಗ: ಸುರೇಶ್‌ ಕುಮಾರ್

Update: 2020-02-13 15:14 GMT

ಬೆಂಗಳೂರು, ಫೆ.13: ಬಿಸಿಯೂಟ ನೌಕರರ ಸಂಭಾವನೆಯ ಕೇಂದ್ರದ ಪಾಲನ್ನು ಹೆಚ್ಚಿಸುವುದರ ಕುರಿತಂತೆ ಕೇಂದ್ರ ಸರಕಾರದ ಗಮನ ಸೆಳೆಯಲು ಸದ್ಯದಲ್ಲೇ ದಿಲ್ಲಿಗೆ ನಿಯೋಗ ಕರೆದೊಯ್ಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಗುರುವಾರ ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಾಹಾರ ಯೋಜನೆಯ ಬಿಸಿಯೂಟ ನೌಕರರ ಬೇಡಿಕೆಗಳ ಕುರಿತು ವಿವಿಧ ಬಿಸಿಯೂಟ ನೌಕರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಗ್ರ ಶಿಕ್ಷಣ ಅಭಿಯಾನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮಕ್ಕಳಿಗೆ ಬಿಸಿಯೂಟ ತಯಾರು ಮಾಡುವ ಸಿಬ್ಬಂದಿಗಳ ಬೇಡಿಕೆಗಳ ಕುರಿತಂತೆ ರಾಜ್ಯ ಸರಕಾರ ಮುಕ್ತ ಮನಸ್ಸು ಹೊಂದಿದ್ದು, ಹಂತಹಂತವಾಗಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಧ್ಯಾಹ್ನ ಉಪಾಹಾರ ಯೋಜನೆ ನೌಕರರಿಗೆ ನಿವೃತ್ತಿ ನಂತರ ಒಂದಷ್ಟು ಮೊತ್ತದ ಹಣ ಹಾಗೂ ಅಪಘಾತ ವಿಮೆಯಂತಹ ಯೋಜನೆಯನ್ನು ಜಾರಿಗೊಳಿಸುವುದು. ನೌಕರರ ಪ್ರೀಮಿಯಂ ಪಾವತಿಯೊಂದಿಗೆ ವಿಮೆ ಮಾಡುವ ಸಂಬಂಧದಲ್ಲಿ ಭಾರತೀಯ ಜೀವ ವಿಮಾ ನಿಗಮದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಸರಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳವಾದಾಗ ಗುತ್ತಿಗೆ ನೌಕರರಿಗೂ ಅದು ಅನ್ವಯವಾಗುವಂತೆ ತಮಿಳುನಾಡು ಸರಕಾರ ಜಾರಿಗೊಳಿಸಿರುವ ನೀತಿಯನ್ನು ಅಧ್ಯಯನ ಮಾಡಿ ಆ ನಿಟ್ಟಿನಲ್ಲಿ ಬಿಸಿಯೂಟ ನೌಕರರಿಗೆ ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂದು ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಶಾಲೆಗಳಲ್ಲಿ ಡಿ.ಗ್ರೂಪ್ ನೌಕರರು ಇಲ್ಲವಾದ್ದರಿಂದ ಬಿಸಿಯೂಟ ನೌಕರರನ್ನೇ ಡಿ.ಗ್ರೂಪ್ ನೌಕರರನ್ನಾಗಿ ನೇಮಿಸಿಕೊಳ್ಳಬೇಕು ಹಾಗೂ ಸ್ಥಳಾವಕಾಶವಿರುವ ಶಾಲೆಗಳಲ್ಲಿ ತೋಟಗಾರಿಕೆ ಕೈಗೊಳ್ಳಲು ನರೇಗಾ ಯೋಜನೆಯಡಿ ಬಿಸಿಯೂಟ ನೌಕರರನ್ನು ಬಳಸಿಕೊಳ್ಳಬೇಕು ಎಂಬ ಬೇಡಿಕೆಗಳ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬಿಸಿಯೂಟ ನೌಕರರಿಂದ ಸಂಬಂಧಿಸಿದ ಶಾಲೆಯ ಮಕ್ಕಳಿಗೆ ಮಾತ್ರವೇ ಅಡುಗೆ ತಯಾರಿಸಬೇಕೆಂಬುದನ್ನು ಹೊರತು ಪಡಿಸಿದ ಯಾವುದೇ ಕೆಲಸಗಳನ್ನು ಬಿಸಿಯೂಟ ನೌಕರರಿಂದ ಮಾಡಿಸಿಕೊಳ್ಳಬಾರದೆಂದು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಲಾಗುವುದು. ಯಾವುದೇ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುವುದನ್ನು ಹೊರತುಪಡಿಸಿ ಬೇರಾವುದೇ ಕೆಲಸ ಮಾಡಿಸಿದರೆ ಅಂತಹ ಶಾಲೆಗಳ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

-ಸುರೇಶ್‌ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News