×
Ad

ಕರಾವಳಿ-ಮಲೆನಾಡು ಪ್ರದೇಶದಲ್ಲಿ ‘ಕಾಡು-ಕಾನು ಅಭಿವೃದ್ಧಿ ಯೋಜನೆ’ ಪುನಃ ಜಾರಿಗೆ ಮನವಿ

Update: 2020-02-13 21:34 IST

ಬೆಂಗಳೂರು, ಫೆ. 13: ರಾಜ್ಯದಲ್ಲಿನ ನದಿ ಮೂಲಗಳ ಸಂರಕ್ಷಣೆಗೆ ವಿಶೇಷ ಯೋಜನೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಬಯಲು ಸೀಮೆಯಲ್ಲಿ ಹಸಿರು ಹೆಚ್ಚಿಸಲು ಬಯಲು ಸೀಮೆ ವನವಿಕಾಸ ಯೋಜನೆ ರೂಪಿಸಬೇಕೆಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.

ಗುರುವಾರ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಮನವಿ ಸಲ್ಲಿಸಿದ ಅವರು, ಉ.ಕ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಪ್ರದೇಶವಿದ್ದು, ಆ ಪೈಕಿ 5 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಅಭಿವೃದ್ಧಿ ಯೋಜನೆಯನ್ನು ಈ ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು. ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ದೇವರ ಕಾಡು-ಕಾನುಗಳ ಸಂರಕ್ಷಣೆ ಅಭಿವೃದ್ಧಿ ಯೋಜನೆಯನ್ನು ಪುನಃ ಜಾರಿಗೆ ತರಬೇಕು. ಕರಾವಳಿ ಹಸಿರು ಕವಚ ಯೋಜನೆಯಿಂದ ಸಮುದ್ರ ಕೊರೆತ ಮತ್ತು ಸುನಾಮಿ ತಡೆಯಲು ಸಹಾಯಕ. ಆದುದರಿಂದ ಈ ಯೋಜನೆ ಪುನಃ ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದ್ದಾರೆ.

ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ಹಿತ್ತಲು-ತರಕಾರಿ-ಹಣ್ಣಿನ ಗಿಡ ಬೆಳೆಸಲು ಪ್ರೋತ್ಸಾಹ ನೀಡಲು ಹಿತ್ತಲು ಹೊನ್ನು ಎಂಬ ವಿಶೇಷ ಯೋಜನೆ ರೂಪಿಸಬೇಕು. ಅದಕ್ಕಾಗಿ ತೋಟಗಾರಿಕಾ ಇಲಾಖೆ ಮೂಲಕ ಸಬ್ಸಿಡಿ ನೀಡಿ, ತರಬೇತಿ ನೀಡುವ ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News