ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡಲು ಬಿಎಸ್‌ವೈಗೆ ರೈತರ ಒತ್ತಾಯ

Update: 2020-02-13 16:07 GMT

ಬೆಂಗಳೂರು, ಫೆ. 13: ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಕೃಷಿ ಸಾಲ ಪೂರ್ಣ ರದ್ದು ಹಾಗೂ ಹೊಸ ಸಾಲ, ಚಿನ್ನಾಭರಣಗಳ ಮೇಲೆ ರೈತರು ಪಡೆದ ಕೃಷಿ ಸಾಲಕ್ಕೆ ಹಳೆಯ ಮಾದರಿಯಂತೆ ಬಡ್ಡಿ ಮುಂದುವರಿಸುವುದು ಸೇರಿದಂತೆ ರೈತರ ಬದುಕು ಹಸನುಗೊಳಿಸಲು ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ರೂಪಿಸಬೇಕೆಂದು ರೈತ ಸಂಘಟನೆಗಳು ಸಿಎಂ ಬಿಎಸ್‌ವೈಗೆ ಮನವಿ ಮಾಡಿವೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ಬರಗಾಲಕ್ಕೆ ತುತ್ತಾಗಿರುವ ಪ್ರದೇಶದಲ್ಲಿ ಎಕರೆಗೆ 25 ಸಾವಿರ ರೂ. ನಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿವೆ.

ಆನ್‌ಲೈನ್ ಟ್ರೇಡಿಂಗ್ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಕೃಷಿ ಮಾರುಕಟ್ಟೆಗಳಲ್ಲಿಯೂ ಜಾರಿಗೆ ತರಬೇಕು. ಮೇಕೆದಾಟು ಯೋಜನೆಯನ್ನು ಕೂಡಲೇ ಜಾರಿ ಮಾಡಿ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು.

ಹಳ್ಳಿ ಮತ್ತು ಪಟ್ಟಣ ತಾರತಮ್ಯ ತಪ್ಪಿಸಲು ಸಮಾನ ವಿದ್ಯುಚ್ಛಕ್ತಿ ನೀತಿ ಜಾರಿಗೆ ತರಬೇಕು. ಸೌರ ವಿದ್ಯುತ್ ಉತ್ಪಾದನೆಯನ್ನು ಖಾಸಗಿ ಕಂಪೆನಿಗಳ ಬದಲಿಗೆ ರೈತರಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿ ಗ್ರಾ.ಪಂ.ಗೆ ಒಬ್ಬರಂತೆ ರೈತ ಅನುವುಗಾರರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ವಿಚಾರಗಳ ಜಾರಿ: ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ಬಜೆಟ್‌ನಲ್ಲಿ ರೈತರ ವಿಚಾರಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಬಳಿಕ ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಿಂದ ರೈತರು ಸಭೆಗೆ ಆಗಮಿಸಿದ್ದು, ಕೃಷಿ, ನೀರಾವರಿ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಿಸುವ ಸಂಬಂಧ ಮಾತುಕತೆ ನಡೆಸಿದ್ದೇನೆ. ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಬಜೆಟ್‌ನಲ್ಲಿ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಎಚ್.ಆರ್.ಬಸವರಾಜಪ್ಪ, ಕುರುಬೂರು ಶಾಂತಕುಮಾರ್ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News