ಬ್ಯಾಂಕ್‌ಗಳೇ ದಯವಿಟ್ಟು ನಿಮ್ಮ ಹಣ ತೆಗೆದುಕೊಳ್ಳಿ : ವಿಜಯ್ ಮಲ್ಯ ಮನವಿ

Update: 2020-02-14 05:11 GMT

ಲಂಡನ್ : "ಬ್ಯಾಂಕ್‌ಗಳೇ, ದಯವಿಟ್ಟು ನಿಮಗೆ ಬಾಕಿ ಇರುವ, ನೀವು ನೀಡಿದ ಮೂಲ ಹಣವನ್ನು ಶೇಕಡ 100ರಷ್ಟು ವಾಪಾಸು ತೆಗೆದುಕೊಳ್ಳಿ" ಎಂದು ವಿಜಯ್ ಮಲ್ಯ ಮನವಿ ಮಾಡಿದ್ದಾರೆ.

ಭಾರತಕ್ಕೆ ಗಡೀಪಾರು ಮಾಡುವ ಆದೇಶದ ವಿರುದ್ಧ ಬ್ರಿಟನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿಯ ಮೂರು ದಿನಗಳ ವಿಚಾರಣೆಯ ಕೊನೆಯಲ್ಲಿ ಮಲ್ಯ ಈ ಕೋರಿಕೆ ಮುಂದಿಟ್ಟರು.

ಬ್ಯಾಂಕ್‌ಗಳಿಂದ ಪಡೆದ 9000 ಕೋಟಿ ರೂ. ವಾಪಾಸು ಮಾಡದೇ ವಂಚಿಸಿದ ಆರೋಪ ಎದುರಿಸುತ್ತಿರುವ ಕಿಂಗ್‌ಫಿಶರ್ಸ್‌ ಸಮೂಹದ ಮುಖ್ಯಸ್ಥ, "ಕಾನೂನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಒಂದೇ ಆಸ್ತಿಗಾಗಿ ಜಗಳವಾಡುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲಿ ನನ್ನನ್ನು ವಿವೇಚನಾಯುಕ್ತವಾಗಿ ನಡೆಸಿಕೊಳ್ಳುತ್ತಿಲ್ಲ" ಎಂದು ಆಪಾದಿಸಿದರು.

"ಬ್ಯಾಂಕ್‌ಗಳು ತಾವು ನೀಡಿದ ಮೂಲ ಹಣವನ್ನು ಶೇಕಡ 100ರಷ್ಟು ವಾಪಾಸು ತೆಗೆದುಕೊಳ್ಳುವಂತೆ ಕೈಮುಗಿದು ಮನವಿ ಮಾಡುತ್ತಿದ್ದೇನೆ" ಎಂದು ಲಂಡನ್‌ನಲ್ಲಿರುವ ರಾಯಲ್ ಕೋರ್ಟ್ ಆಫ್ ಜೆಸ್ಟೀಸ್‌ನ ಹೊರಗೆ ಸ್ಪಷ್ಟಪಡಿಸಿದರು.

"ನಾನು ಹಣ ಮರುಪಾವತಿ ಮಾಡಿಲ್ಲ ಎಂಬ ಬ್ಯಾಂಕ್‌ಗಳ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಈಡಿ ಸ್ವಯಂಪ್ರೇರಿತವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಾನು ಪಿಎಂಎಲ್‌ಎ ಅಡಿಯಲ್ಲಿ ಯಾವುದೇ ಅಪರಾಧ ಎಸಗಿಲ್ಲ" ಎಂದು ಸಮರ್ಥಿಸಿಕೊಂಡರು.

"ಬ್ಯಾಂಕ್‌ಗಳು ತಮ್ಮ ಹಣ ತೆಗೆದುಕೊಳ್ಳಲಿ ಎಂದು ನಾನು ಹೇಳುತ್ತಿದ್ದೇನೆ. ಆದರೆ ಈಡಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಈ ಆಸ್ತಿಗಳ ಮೇಲೆ ನಮ್ಮ ಕ್ಲೇಮ್ ಇದೆ ಎಂದು ಹೇಳುತ್ತಿದೆ. ಹೀಗೆ ಈಡಿ ಹಾಗೂ ಬ್ಯಾಂಕ್‌ಗಳು ಒಂದೇ ಆಸ್ತಿಗಾಗಿ ಹೋರಾಡುತ್ತಿವೆ ಎಂದು ಬಣ್ಣಿಸಿದರು.

ಭಾರತಕ್ಕೆ ವಾಪಸ್ಸಾಗುತ್ತೀರಾ ಎಂಬ ಪ್ರಶ್ನೆಗೆ, "ನನ್ನ ಕುಟುಂಬ ಎಲ್ಲಿರುತ್ತದೆಯೋ ನಾನು ಅಲ್ಲಿರುತ್ತೇನೆ. ನನ್ನ ಹಿತಾಸಕ್ತಿ ಎಲ್ಲಿದೆಯೋ ನಾನು ಅಲ್ಲಿರುತ್ತೇನೆ" ಎಂದು ಉತ್ತರಿಸಿದರು.

ಸಿಬಿಐ ಹಾಗೂ ಈಡಿ ತಾರ್ಕಿಕವಾಗಿ ಕೆಲಸ ಮಾಡಿದ್ದರೆ ಕಥೆ ಬೇರೆಯೇ ಆಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಇವು ವಿವೇಚನಾಹಿರತವಾಗಿ ಕೆಲಸ ಮಾಡುತ್ತಿವೆ ಎಂದು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News