ತೀರ್ಪು ಓದುವಾಗ ಕುಸಿದು ಬಿದ್ದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ

Update: 2020-02-14 11:55 GMT

ಹೊಸದಿಲ್ಲಿ, ಫೆ.14:  ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಮರಣದಂಡನೆ ಶಿಕ್ಷೆಗೊಳಗಾದವರನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವಂತೆ ಕೇಂದ್ರದ ಮನವಿಯ ಬಗ್ಗೆ ತೀರ್ಪು ಓದುವಾಗ  ಸುಪ್ರೀಂಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ಆರ್ ಭಾನುಮತಿ ಶುಕ್ರವಾರ ನ್ಯಾಯಾಲಯದಲ್ಲಿ ಕುಸಿದು ಬಿದ್ದರು.   

ನ್ಯಾಯಮೂರ್ತಿ ಭಾನುಮತಿ  ಅವರನ್ನು  ತಕ್ಷಣ ಗಾಲಿಕುರ್ಚಿಯಲ್ಲಿ  ಸಿಬ್ಬಂದಿ  ಛೇಂಬರ್ ಗೆ ಕರೆದೊಯ್ದರು. ಅಲ್ಲಿ ವೈದ್ಯರು ಚಿಕಿತ್ಸೆ ನೀಡಿದ ಬಳಿಕ  ನ್ಯಾಯಮೂರ್ತಿ ಭಾನುಮತಿ ಚೇತರಿಸಿಕೊಂಡರು.

ನಿರ್ಭಯಾ ಅತ್ಯಾಚಾರ  ಮತ್ತು ಕೊಲೆ  ಪ್ರಕರಣದಲ್ಲಿ  ಮರಣದಂಡನೆಗೆ ಗುರಿಯಾಗಿರುವ  ಅಪರಾಧಿ ವಿನಯ್   ಕುಮಾರ್ ಶರ್ಮಾ ಕ್ಷಮಾದಾನ  ಅರ್ಜಿಯ ಬಗ್ಗೆ ರಾಷ್ಟ್ರಪತಿಗಳ ನಿರ್ಧಾರವನ್ನು ಪ್ರಶ್ನಿಸಿ  ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್   ಶುಕ್ರವಾರ ವಜಾಗೊಳಿಸಿತ್ತು.

ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಅಶೋಕ್ ಭೂಷಣ್ ಮತ್ತು ಎ ಎಸ್ ಬೋಪಣ್ಣ ಅವರ ನ್ಯಾಯಪೀಠವು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದೆ. ಈ ತೀರ್ಪು ನೀಡಿದ ಬಳಿಕ ನ್ಯಾಯಮೂರ್ತಿ ಭಾನುಮತಿ ಕುಸಿದು  ಬಿದ್ದರು.   ತನ್ನ ಛೇಂಬರ್ ನಲ್ಲೇ ನ್ಯಾಯಮೂರ್ತಿ ಭಾನುಮತಿ ಘಟನೆಯ ನಂತರ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದರು.   

ವಿನಯ್ ಕುಮಾರ್ ಶರ್ಮಾನನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಮತ್ತು ತಿಹಾರ್ ಜೈಲು ಅಧಿಕಾರಿಗಳು   ಆತನಿಗೆ  ಚಿತ್ರಹಿಂಸೆ ನೀಡಿದೆ ಎಂದು  ಆತನ ಪರ ವಕೀಲ ಎ.ಪಿ.ಸಿಂಗ್ ವಾದಿಸಿದ್ದರು.

 ಶರ್ಮಾ ಮಾನಸಿಕವಾಗಿ ಅಸ್ವಸ್ಥ ಎಂಬ ವಾದವನ್ನು  ಸುಪ್ರೀಂ ಕೋರ್ಟ್ ನ್ಯಾಯಾಲಯ ತಿರಸ್ಕರಿಸಿದ್ದು, ಮಾನಸಿಕವಾಗಿ ಆರೋಗ್ಯವಾಗಿದ್ದಾನೆಂದು  ವೈದ್ಯಕೀಯ ವರದಿಯು ಹೇಳುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. 

 ಪ್ರಕರಣದಲ್ಲಿ ಮರಣದಂಡನೆ  ಶಿಕ್ಷೆಗೆ ಗುರಿಯಾಗಿರುವ ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31)   ತಿಹಾರ್ ಜೈಲಿನಲ್ಲಿ ಇದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News