×
Ad

ರಾಜ್ಯದ ಸರ್ವೆ ಪ್ರಕ್ರಿಯೆಯಲ್ಲಿ ಸುಧಾರಣೆಗೆ ಮುಂದಾಗಿದ್ದ ಐಎಎಸ್ ಅಧಿಕಾರಿ ಮೌದ್ಗಿಲ್ ಎತ್ತಂಗಡಿ

Update: 2020-02-14 20:53 IST
    ಫೋಟೊ ಕೃಪೆ: www.deccanherald.com

ಬೆಂಗಳೂರು,ಫೆ.14: ಜಮೀನು ಸರ್ವೆ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಲು ಮುಂದಾಗಿದ್ದ ಕರ್ನಾಟಕ ಸರ್ವೆ ಮತ್ತು ಭೂದಾಖಲೆಗಳ ಆಯುಕ್ತ ಮುನೀಷ್ ಮೌದ್ಗಿಲ್ ಅವರನ್ನು ಎತ್ತಂಗಡಿ ಮಾಡಲಾಗಿದೆ.

ರಾಜ್ಯದಲ್ಲಿ ತಮ್ಮ ಜಮೀನುಗಳ ಸರ್ವೆ ಮಾಡಿಸಲು ಜನರು ಪರದಾಡುತ್ತಿದ್ದಾರೆ. ಸರಕಾರಿ ಸರ್ವೆಯರ್ ಗಳ ಕೊರತೆಯಿಂದಾಗಿ ಜನರು ತಮ್ಮ ಜಮೀನುಗಳ ಸರ್ವೆ ಕಾರ್ಯಕ್ಕಾಗಿ ತಿಂಗಳುಗಟ್ಟಲೆ,ಕೆಲವೊಮ್ಮೆ ವರ್ಷಕ್ಕೂ ಅಧಿಕ ಸಮಯ ಕಾಯುವಂತಾಗಿದೆ.

ತಮ್ಮ ಜಮೀನುಗಳ ಸರ್ವೆಗಾಗಿ ಕೋರಿ ಜನರು ಸಲ್ಲಿಸಿರುವ 1.31 ಲಕ್ಷ ಅರ್ಜಿಗಳು ವರ್ಷಗಳಿಂದಲೂ ಇಲಾಖೆಯಲ್ಲಿ ಬಾಕಿಯಿದ್ದು, ಕೇವಲ 1,937 ಸರ್ವೆಯರ್‌ಗಳು ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಜಟಿಲ ಸಮಸ್ಯೆಯನ್ನು ಎದುರಿಸಲು ಮೌದ್ಗಿಲ್ ಮಧ್ಯಂತರ ಕ್ರಮವೊಂದನ್ನು ಕೈಗೊಳ್ಳುವ ಮೂಲಕ ಸರ್ವೆ ಪ್ರಕ್ರಿಯೆಯಲ್ಲಿ ಸುಧಾರಣೆಗೆ ಮುಂದಾಗಿದ್ದರು.

ಮೌದ್ಗಿಲ್ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಾಕಿಯಿರುವ ವಿವಿಧ ಜಿಲ್ಲೆಗಳಲ್ಲಿ ಮೂರು ತಿಂಗಳ ಅವಧಿಗೆ 97 ಸರ್ವೆಯರ್‌ಗಳನ್ನು ಪ್ರಭಾರ ನಿಯೋಜನೆಗೊಳಿಸಿದ್ದರು. ಈ ಪೈಕಿ 60 ಸರ್ವೆಯರ್‌ಗಳನ್ನು ಅವರ ನೆರೆಯ ಜಿಲ್ಲೆಗಳಿಗೆ ಕಳುಹಿಸಲಾಗಿದ್ದರೆ ಇತರರನ್ನು ಅವರ ಮನೆಯಿಂದ ನೂರಾರು ಕಿ.ಮೀ.ದೂರದ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಇದು ರಾಜ್ಯ ಸರಕಾರಿ ನೌಕರರ ಸಂಘದ ಆಕ್ರೋಶಕ್ಕೆ ಕಾರಣವಾಗಿತ್ತು.

ಪರಿಣಾಮವಾಗಿ 1998ರ ತಂಡದ ಐಎಎಸ್ ಅಧಿಕಾರಿಯಾಗಿರುವ ಮೌದ್ಗಿಲ್ ಅವರನ್ನು ಗುರುವಾರ ಹುದ್ದೆಯಿಂದ ಎತ್ತಂಗಡಿಗೊಳಿಸಲಾಗಿದೆ. ಅವರಿಗೆ ಈಗ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳ ಇಲಾಖೆಯ ಕಾರ್ಯದರ್ಶಿ ಹುದ್ದೆಯನ್ನು ತೋರಿಸಲಾಗಿದೆ.

“ನೀವು ಕುಟುಂಬದಲ್ಲಿನ ಮದುವೆಗೆ ಹಣ ಹೊಂದಿಸಲು ನಿಮ್ಮ ಆಸ್ತಿಯನ್ನು ಮಾರಾಟ ಮಾಡಲು ಬಯಸಿದ್ದೀರಿ ಎಂದಿಟ್ಟುಕೊಳ್ಳಿ. ಇಂತಹ ಸಂದರ್ಭದಲ್ಲಿ ಜಮೀನಿನ ಸರ್ವೆ ಮಾಡಿಸಲು ಕಾಯಬೇಕಾದ ಸ್ಥಿತಿಯನ್ನು ಸುಮ್ಮನೆ ಊಹಿಸಿಕೊಳ್ಳಿ” ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದ ಮೌದ್ಗಿಲ್, “ನಾವು ಜನರ ಸೇವೆಗಾಗಿಯೇ ಇದ್ದೇವೆ. ಹೀಗಿರುವಾಗ ಜನರು ತೊಂದರೆಯಲ್ಲಿರುವ ಜಿಲ್ಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲು ಸರ್ವೆಯರ್‌ಗಳಿಗೆ ಏನು ಸಮಸ್ಯೆ” ಎಂದು ಪ್ರಶ್ನಿಸಿದರು.

 ರಾಜ್ಯದಲ್ಲಿ ಸುಮಾರು 3,600 ಸರಕಾರಿ ಸರ್ವೆಯರ್‌ಗಳು ಇದ್ದಾರೆ. ಆದರೆ ಬಳಕೆಗೆ ಸಿಗುತ್ತಿರುವುದು 1,937 ಸರ್ವೆಯರ್‌ಗಳು ಮಾತ್ರ. ಯಾವುದೇ ಸಮಯದಲ್ಲಿಯೂ 300-400 ಸರ್ವೆಯರ್‌ಗಳು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಅಥವಾ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸಕ್ಕೆ ನಿಯುಕ್ತರಾಗಿರುತ್ತಾರೆ. ಸುಮಾರು 300 ಸರ್ವೆಯರ್‌ಗಳು ರಜಾದಲ್ಲಿದ್ದಾರೆ ಎಂದ ಅವರು,ತಮ್ಮ ಜಮೀನುಗಳ ಸರ್ವೆಗಾಗಿ ಕೋರುವ ಜನರು ಕಾಯಬೇಕಾದ ಕಾಲಾವಧಿಯನ್ನು ಕಂಪ್ಯೂಟರ್ ಸಾಫ್ಟ್‌ವೇರ್ ನಿರ್ಧರಿಸುತ್ತದೆ. ಸಾಮಾನ್ಯವಾಗಿ ಓರ್ವ ಸರ್ವೆಯರ್‌ಗೆ ತಿಂಗಳಿಗೆ 23 ಸರ್ವೆ ಪ್ರಕರಣಗಳನ್ನು ನಿಗದಿಗೊಳಿಸಲಾಗುತ್ತದೆ. ಬಹಳಷ್ಟು ಪ್ರಕರಣಗಳು ಬಾಕಿಯಿದ್ದರೆ ನೂತನ ಅರ್ಜಿದಾರ ತನ್ನ ಅರ್ಜಿಯ ಸರದಿಗಾಗಿ ಕಾಯಬೇಕಾಗುತ್ತದೆ ಮತ್ತು ಕಾಯುವಿಕೆ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ವಿವರಿಸಿದರು.

ಸರ್ವೆಯರ್‌ಗಳ ಪ್ರಭಾರ ನಿಯೋಜನೆಯು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದ್ದು,ರಾಜ್ಯ ಸರಕಾರಿ ನೌಕರರ ಸಂಘವು ತನ್ನ ವಿರುದ್ಧ ಸರಕಾರಕ್ಕೆ ದೂರು ಸಲ್ಲಿಸಿ,ತನ್ನ ವರ್ಗಾವಣೆಗೆ ಆಗ್ರಹಿಸಿತ್ತು. ಪ್ರಜೆಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದ್ದಕ್ಕಾಗಿ ತನ್ನನ್ನುಗುರಿಯಾಗಿಸಿಕೊಳ್ಳಲಾಗಿದೆ ಎಂದು ಮೌದ್ಗಿಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News