ಬೆಲೆ ಏರಿಕೆ: ಕೇಂದ್ರದ ವಿರುದ್ಧ ಖಾಲಿ ಸಿಲಿಂಡರ್‌ಗಳೊಂದಿಗೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Update: 2020-02-14 16:16 GMT

ಬೆಂಗಳೂರು, ಫೆ.14: ಅಚ್ಚೆ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಅಡುಗೆ ಅನಿಲ ಬೆಲೆ ಏರಿಸುವ ಮೂಲಕ ಲೂಟಿಮಾಡುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಪುರಭವನ ಮುಂಭಾಗ ಕರ್ನಾಟಕ ಪ್ರದೇಶದ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರದ ಜನವಿರೋಧಿ ನೀತಿಗಳನ್ನು ಖಂಡಿಸಿ ಖಾಲಿ ಸಿಲಿಂಡರ್‌ಗಳೊಂದಿಗೆ ಪ್ರತಿಭಟಿಸಿ ಗಮನ ಸೆಳೆದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಹಿಳಾ ಅಧ್ಯಕ್ಷೆ ಡಾ.ಪುಪ್ಪಅಮರನಾಥ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ದರ ಗಗನಕ್ಕೇರಿದೆ. ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಕೇಂದ್ರ ಸರಕಾರದ ಕೆಟ್ಟ ಆರ್ಥಿಕ ನೀತಿಗಳು ಇದಕ್ಕೆ ಕಾರಣ ಎಂದು ಆಪಾದಿಸಿದರು.

ಡೀಸೆಲ್ ದರ ಏರಿಕೆಯಿಂದ ಸಾರಿಗೆ ದರ, ದಿನನಿತ್ಯದ ವಸ್ತುಗಳ ದರವು ಕೂಡ ಏರಿಕೆಯಾಗಿ ಬಡವರು, ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತಾಗಿದೆ ಎಂದ ಅವರು, ಈ ಕೂಡಲೇ ಗ್ಯಾಸ್ ಬೆಲೆಗೆ ಕಡಿವಾಣ ಹಾಕುವ ಮೂಲಕ ಜನ ಸಾಮಾನ್ಯರಿಗೆ ಅಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದರು.

ಯುಪಿಎ ಆಡಳಿತದಲ್ಲಿದ್ದಾಗ ಸಿಲಿಂಡರ್ ಬೆಲೆ 387 ರೂ. ಇದ್ದ ವೇಳೆಯಲ್ಲಿ, ಈಗ ಸಚಿವರಾಗಿರುವ ನೀತಿನ್ ಗಡ್ಕರಿ, ಸ್ಮತಿ ಇರಾನಿ ಇತರ ಬಿಜೆಪಿ ನಾಯಕರು ದೆಹಲಿಯ ಜಂತರ ಮಂತರನಲ್ಲಿ ಪ್ರತಿಭಟನೆ ನಡೆಸಿ ಯುಪಿಎ ಸರಕಾರ ಜನರನ್ನು ಲೂಟಿ ಮಾಡುತ್ತಿದೆ ಎಂದಿದ್ದರು. ಈಗ ಅವರೇನು ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News