ಖಾತೆ ಬಿಟ್ಟುಕೊಡಲು ಸಿದ್ಧ: ಅರಣ್ಯ ಸಚಿವ ಆನಂದ್ ಸಿಂಗ್
ಬೆಂಗಳೂರು, ಫೆ. 14: ನನ್ನ ಮೇಲೆ ನೇರವಾಗಿ ಅರಣ್ಯ ನಾಶದ ಆರೋಪ ಇಲ್ಲ. ಯಾರದ್ದೋ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಗಿದೆ. ಈ ಆರೋಪಗಳಿಗಾಗಿ ನನ್ನ ಅರಣ್ಯ ಖಾತೆ ಹಿಂಪಡೆಯಲು ಬಯಸಿದರೆ ಬಿಟ್ಟುಕೊಡಲು ಸಿದ್ಧ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಪಿತೂರಿಯಿಂದ ನನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದು, ತಾನು ಯಾವುದೇ ಗಣಿ ಕಂಪೆನಿ ಮಾಲಕನಲ್ಲ. ಈ ಕುರಿತು ಚುನಾವಣಾ ಆಯೋಗಕ್ಕೂ ಪ್ರಮಾಣ ಪತ್ರ ಸಲ್ಲಿಸಿದ್ದೇನೆ ಎಂದರು.
ಗಣಿ ಕಂಪೆನಿಯ ಎಂಟು ಜನರಲ್ಲಿ ತನ್ನ ತಂದೆ ಕೂಡ ಒಬ್ಬರು. ತಂದೆ ನಿವೃತ್ತಿ ಬಳಿಕ ಆ ಕೆಲಸ ವಹಿಸಿಕೊಂಡಿದ್ದೆ. ನನ್ನ ವಿರುದ್ಧ ಯಾವುದೇ ರೀತಿಯಲ್ಲಿಯೂ ಆರೋಪವಿಲ್ಲ ಎಂದ ಅವರು, ಖಾತೆ ಬದಲಾವಣೆ ಮಾಡುವುದಾದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಲಿ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಆಗಿರುವ ರಾಜಕೀಯ ಅನುಭವದಷ್ಟು ನನಗೆ ವಯಸ್ಸಿಲ್ಲ. ಅವರಷ್ಟು ಎತ್ತರಕ್ಕೂ ನಾನು ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಅವರ ಹೇಳಿಕೆಗೆ ನಾನು ಉತ್ತರ ನೀಡುವಷ್ಟು ದೊಡ್ಡವ ಖಂಡಿತ ಅಲ್ಲ ಎಂದು ಆನಂದ್ ಸಿಂಗ್ ನಿರಾಕರಿಸಿದರು.
ನನ್ನ ಮೇಲೆ 15 ಪ್ರಕರಣಗಳು ದಾಖಲಾಗಿರುವುದು ನಿಜ. ರಾಜ್ಯದ ಜನರನ್ನು ಕತ್ತಲೆಯಲ್ಲಿ ಇಡುವುದಿಲ್ಲ. ನನ್ನ ಮೇಲೆ ದಾಖಲಿಸಿರುವ ಆರೋಪಗಳನ್ನು ಪರಿಶೀಲಿಸಲಿ. ನೇರ ಆರೋಪ ಇದ್ದರೆ ಹೇಳಲಿ. ತನ್ನಿಂದ ರಾಜ್ಯದ ಅರಣ್ಯ ಲೂಟಿ ಆಗುತ್ತದೆ ಎಂದು ಭಾವಿಸಿ ಖಾತೆ ಬದಲಾವಣೆ ಮಾಡಿದರೆ ಅದಕ್ಕೆ ನಾನು ಸಿದ್ಧ ಎಂದು ಪುನರುಚ್ಚರಿಸಿದರು