ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹಕ್ಕು ರಕ್ಷಿಸಲು ಆಧ್ಯಾದೇಶ: ರಾಮ್‌ವಿಲಾಸ್ ಪಾಸ್ವಾನ್ ಆಗ್ರಹ

Update: 2020-02-14 17:44 GMT

ಹೊಸದಿಲ್ಲಿ, ಫೆ.14: ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ನ ಇತ್ತೀಚಿನ ನಿರ್ಧಾರವನ್ನು ಸರಿಪಡಿಸಲು ಸರಕಾರ ಆಧ್ಯಾದೇಶವನ್ನು ಹೊರಡಿಸಬೇಕು ಎಂದು ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಒತ್ತಾಯಿಸಿದ್ದಾರೆ.

ಅಲ್ಲದೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸಂಬಂಧಿಸಿದ ಇಂತಹ ವಿಷಯಗಳನ್ನು ನ್ಯಾಯಾಂಗ ವಿಮರ್ಶೆಯಿಂದ ಪ್ರತ್ಯೇಕಿಸುವ ನಿಟ್ಟಿನಲ್ಲಿ ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಬೇಕು ಎಂದವರು ಹೇಳಿದ್ದಾರೆ. ಸುಪ್ರೀಂಕೋರ್ಟ್‌ನ ತೀರ್ಪಿನ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಸರಕಾರ ಕಾನೂನು ಸಲಹೆ ಪಡೆಯುತ್ತಿದೆ ಎಂದವರು ಹೇಳಿದ್ದಾರೆ.

ಮರುಪರಿಶೀಲನೆ ಅರ್ಜಿ ಸಲ್ಲಿಸಿದರೆ ಚೆಂಡು ಮತ್ತೆ ನ್ಯಾಯಾಲಯದ ಅಂಗಳಕ್ಕೇ ಬೀಳುತ್ತದೆ. ಅದರ ಬದಲು ಆಧ್ಯಾದೇಶ ಹೊರಡಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವುದು ಸುಲಭ ಮಾರ್ಗವಾಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪಾಸ್ವಾನ್ ಹೇಳಿದ್ದಾರೆ.

ಉದ್ಯೋಗದಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಮತ್ತು ಈ ಬಗ್ಗೆ ರಾಜ್ಯ ಸರಕಾರಗಳು ನಿರ್ಧರಿಸಬೇಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಈ ತೀರ್ಪು ಎಸ್‌ಸಿ, ಎಸ್‌ಟಿ ಸಮುದಾಯದವರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಆಕ್ಷೇಪವಿದೆ. ಆದ್ದರಿಂದ ಆಧ್ಯಾದೇಶ ಜಾರಿಗೊಳಿಸಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ, ಲೋಕಜನಶಕ್ತಿ ಪಕ್ಷದ ಮುಖಂಡ ಪಾಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸಚಿವರೂ ಸೇರಿದಂತೆ ಸುಮಾರು 70 ದಲಿತ ಮತ್ತು ಆದಿವಾಸಿ ಸಮುದಾಯದ ಸಂಸದರು ಈ ವಾರದ ಆರಂಭದಲ್ಲಿ ತನ್ನ ನಿವಾಸದಲ್ಲಿ ಸಭೆ ಸೇರಿ, ಆಧ್ಯಾದೇಶ ಜಾರಿ ಮತ್ತು ಸಂವಿಧಾನದ 9ನೇ ಪರಿಚ್ಛೇದದಡಿ ಸೇರ್ಪಡೆ ಕುರಿತ ಮನವಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ಪಾಸ್ವಾನ್ ಹೇಳಿದ್ದಾರೆ.

 ಕೇಂದ್ರ ಸರಕಾರ ಎಸ್‌ಸಿ/ಎಸ್‌ಟಿ ಸಮುದಾಯದವರ ಹಕ್ಕನ್ನು ರಕ್ಷಿಸಲು ಬದ್ಧವಾಗಿದೆ ಎಂದ ಅವರು, ರಾಹುಲ್ ಗಾಂಧಿ ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಒಂದೇ ಕುಟುಂಬದ ಹಲವರ ಫೋಟೋಗಳಿದ್ದರೂ ಅಂಬೇಡ್ಕರ್ ಅವರ ಫೋಟೋ ವಿಪಿ ಸಿಂಗ್ ಸರಕಾರ ಅಧಿಕಾರಕ್ಕೆ ಬರುವವರೆಗೂ ಯಾಕೆ ಇರಲಿಲ್ಲ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ದೇಶದ ಜನತೆಗೆ ಉತ್ತರ ಹೇಳಬೇಕು ಎಂದು ಪಾಸ್ವಾನ್ ಆಗ್ರಹಿಸಿದರು.

ಸಂಸತ್ತಿನಲ್ಲಿ ಅಧಿವೇಶನ ನಡೆಯದಿದ್ದಾಗ ಆಧ್ಯಾದೇಶ ಜಾರಿಗೆ ತರಬಹುದು. ಆದರೆ ಈಗ ನಡೆಯುತ್ತಿರುವ ಅಧಿವೇಶನದಲ್ಲೇ ಆಧ್ಯಾದೇಶ ಹೊರಡಿಸಬೇಕಿದ್ದರೆ, ರಾಜ್ಯಸಭೆ ಅಥವಾ ಲೋಕಸಭೆಯಲ್ಲಿ ಯಾವುದಾದರು ಒಂದು ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಬೇಕಾಗುತ್ತದೆ. ಇದಕ್ಕೆ ರಾಷ್ಟ್ರಪತಿಯವರ ಸಹಿ ಬಿದ್ದ ಬಳಿಕ ಮುಂದೂಡಲ್ಪಟ್ಟ ಸದನ ಮರು ಸಮಾವೇಶಗೊಳ್ಳಬೇಕು ಎಂಬ ಶಿಷ್ಟಾಚಾರ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಧ್ಯಾದೇಶದ ಆಯಸ್ಸು 6 ತಿಂಗಳು. 6 ತಿಂಗಳೊಳಗೆ ಅಧಿವೇಶನದಲ್ಲಿ ಇದನ್ನು ಕಾನೂನಾಗಿ ಪರಿವರ್ತಿಸಬೇಕು. ಇಲ್ಲದಿದ್ದರೆ ಆಧ್ಯಾದೇಶ ರದ್ದಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News