ಅಭ್ಯಾಸ ಪಂದ್ಯ: ಭಾರತ 263 ರನ್‌ಗೆ ಆಲೌಟ್’

Update: 2020-02-14 19:01 GMT

ಹ್ಯಾಮಿಲ್ಟನ್, ಫೆ.14: ನ್ಯೂಝಿಲ್ಯಾಂಡ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ದಿನ ಭಾರತ ತಂಡ ಹನುಮ ವಿಹಾರಿ ದಿಟ್ಟ ಶತಕ ಹಾಗೂ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರ 93 ರನ್ ನೆರವಿನಿಂದ 263 ರನ್ ಗಳಿಸಿ ಆಲೌಟಾಗಿದೆ. ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್‌ಗಳಾದ ಮಾಯಾಂಕ್ ಅಗರ್ವಾಲ್(1), ಪೃಥ್ವಿ ಶಾ(0) ಹಾಗೂ ಶುಭಮನ್ ಗಿಲ್(0)ವೇಗ ಹಾಗೂ ಬೌನ್ಸ್ ಇರುವ ಪಿಚ್‌ನಲ್ಲಿ ಅಲ್ಪ ಮೊತ್ತಕ್ಕೆ ಮುಗ್ಗರಿಸಿದರು.

ವಿಹಾರಿ ಶತಕ(101, 182 ಎಸೆತ, 10 ಬೌಂಡರಿ,3 ಸಿಕ್ಸರ್) ಹಾಗೂ ಪೂಜಾರ ಅರ್ಧಶತಕದ (93, 211 ಎಸೆತ, 11 ಬೌಂಡರಿ,1ಸಿಕ್ಸರ್)ಹೊರತಾಗಿಯೂ ಭಾರತ 263 ರನ್ ಗಳಿಸಲಷ್ಟೇ ಶಕ್ತವಾಯಿತು. ಶಾ ಹಾಗೂ ಗಿಲ್ ಹೆಚ್ಚುವರಿ ಬೌನ್ಸ್‌ಗೆ ನಿರುತ್ತರವಾದರೆ, ಅಗರ್ವಾಲ್ ವೇಗದ ಬೌಲಿಂಗ್‌ಗೆ ಉತ್ತರಿಸಲು ವಿಫಲರಾದರು. ನ್ಯೂಝಿಲ್ಯಾಂಡ್‌ನ ವೇಗದ ಬೌಲರ್ ಸ್ಕಾಟ್ ಕುಗೆಲ್‌ಜಿನ್(3-40)ತನ್ನ ಮೊದಲ ಸ್ಪೆಲ್‌ನಲ್ಲೇ ಶಾ ವಿಕೆಟ್ ಪಡೆದು ಗಮನ ಸೆಳೆದರು.

ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಗಿಲ್ ನಾಲ್ಕನೇ ಸ್ಥಾನದಲ್ಲಿ ಆಡಿದರೂ ರನ್ ಖಾತೆ ತೆರೆಯಲಿಲ್ಲ.

ಅಜಿಂಕ್ಯ ರಹಾನೆ(18)ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಗ ಭಾರತ 38 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ವಿಹಾರಿ ಹಾಗೂ ಪೂಜಾರ ಐದನೇ ವಿಕೆಟ್‌ಗೆ 195 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಭಾರತ 30 ರನ್‌ಗೆ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಕುಗೆಲ್‌ಜಿನ್(3-40) ಹಾಗೂ ಸೋಧಿ (3-72)ತಲಾ ಮೂರು ವಿಕೆಟ್ ಪಡೆದರೆ, ಗಿಬ್ಸನ್ 26 ರನ್‌ಗೆ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News