ಹೆತ್ತವರ ಜನ್ಮಸ್ಥಳ ತಿಳಿಯದ ಕಾರಣ ನಾನೂ ದಿಗ್ಬಂಧನ ಕೇಂದ್ರಕ್ಕೆ ಹೋಗಬೇಕಾದೀತು: ರಾಜಸ್ಥಾನ ಸಿಎಂ ಗೆಹ್ಲೋಟ್

Update: 2020-02-15 11:33 GMT

ಜೈಪುರ್: "ನನಗೆ ನನ್ನ ಹೆತ್ತವರ ಜನನ ಸ್ಥಳ ತಿಳಿದಿಲ್ಲ. ಮಾಹಿತಿ ನೀಡಲು ಅಸಾಧ್ಯವಾದರೆ ನನಗೆ ಕೂಡ ದಿಗ್ಬಂಧನ ಕೇಂದ್ರದಲ್ಲಿ ಇರಲು ಹೇಳಬಹುದು. ಅಂತಹ ಪರಿಸ್ಥಿತಿ ಎದುರಾದರೆ ದಿಗ್ಬಂಧನ ಕೇಂದ್ರಕ್ಕೆ ಹೋಗುವ ಮೊದಲ ವ್ಯಕ್ತಿ  ನಾನಾಗುತ್ತೇನೆ'' ಎಂದು ರಾಜಸ್ಥಾನ ಸೀಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

'ರಾಜಸ್ಥಾನದ ಶಾಹೀನ್ ಬಾಗ್' ಎಂದು ಬಣ್ಣಿಸಲ್ಪಟ್ಟಿರುವ ಜೈಪುರದಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನಾ ಸ್ಥಳಕ್ಕೆ ಅಚ್ಚರಿಯ ಭೇಟಿ ನೀಡಿದ ಗೆಹ್ಲೋಟ್, ದೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಕೇಂದ್ರ ಸರಕಾರ ವಿವಾದಿತ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.

"ಈ ಕಾಯ್ದೆ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ'' ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ಪ್ರತಿಭಟನಕಾರರ ಜತೆಗಿದೆ ಎಂದು ಹೇಳಿದ ಅವರು ಎನ್‍ಪಿಆರ್‍ ಗಾಗಿ ಹೆತ್ತವರ ಜನನ ಸ್ಥಳದ ಮಾಹಿತಿ ಕೇಳಲಾಗುವುದು ಎಂದಿದ್ದಾರೆ.

"ಕಾನೂನು ರಚಿಸುವುದು ಸರಕಾರದ ಹಕ್ಕಾದರೂ ಜನರ ಭಾವನೆಗಳನ್ನು ಅರ್ಥೈಸಿಕೊಂಡು ಆಡಳಿತ ನಡೆಸಬೇಕಾಗಿರುವುದು ಸರಕಾರಗಳ ಕರ್ತವ್ಯ. ದಿಲ್ಲಿಯ ಶಾಹೀನ್ ಬಾಗ್‍ ನಂತೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಲವಾರು ಮುಖ್ಯಮಂತ್ರಿಗಳು ಸಿಎಎ ವಿರುದ್ಧವಾಗಿದ್ದಾರೆ. ಸರಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News