ಇಬ್ಬರು ಮಕ್ಕಳು ಸಾವು: ವಾಮಾಚಾರದ ಆರೋಪ

Update: 2020-02-15 17:14 GMT

ಮಾಲ್ಡಾ, ಫೆ. 15: ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ವಾಮಾಚಾರ ಆಚರಣೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಜೋಲೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಂತೈಲ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

‘‘ಘಟನೆಯಲ್ಲಿ 5 ಹಾಗೂ 7 ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಗಾಯಗೊಂಡ 3 ಹಾಗೂ 6 ವರ್ಷಗಳ ಇಬ್ಬರು ಸಹೋದರಿಯನ್ನು ಮಾಲ್ಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದೆ. ಸಾವಿಗೆ ಕಾರಣ ಇದುವರೆಗೆ ತಿಳಿದು ಬಂದಿಲ್ಲ’’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಲೋಕ್ ರಾಜೋರಿಯಾ ತಿಳಿಸಿದ್ದಾರೆ.

ನಾಲ್ವರು ಬಾಲಕರು ಹಾಗೂ ಬಾಲಕಿಯರ ಮೇಲೆ ವಾಮಾಚಾರ ಮಾಡಲಾಗಿದೆ. ಸಮೀಪದ ಕಾಡಿನಲ್ಲಿ ಆಟ ಆಡಲು ತೆರಳಿದ್ದ ನಾಲ್ವರು ಮನೆಗೆ ಹಿಂದಿರುಗಿದ ಬಳಿಕ ಪ್ರಜ್ಞೆ ಕಳೆದುಕೊಂಡರು ಎಂದು ಮಕ್ಕಳ ಹೆತ್ತವರು ಆರೋಪಿಸಿದ್ದಾರೆ. ಕಾಡಿನಲ್ಲಿ ಮಕ್ಕಳು ವಿಷಪೂರಿತ ಹಣ್ಣುಗಳನ್ನು ತಿಂದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಕ್ಕೆ ಸ್ಥಳೀಯ ತೃಣಮೂಲ ಕಾಂಗ್ರೆಸ್‌ನ ಶಾಸಕ ದೀಪಾಲಿ ಬಿಸ್ವಾಸ್ ಭೇಟಿ ನೀಡಿದ್ದಾರೆ. ಅವರು ಆಸ್ತ್ರತ್ರೆಗೆ ಕೂಡ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ. ‘‘ಇದು ವಾಮಾಚಾರಕ್ಕೆ ಸಂಬಂಧಿಸಿದ ಪ್ರಕರಣ. ಹೆತ್ತವರು ಮಕ್ಕಳನ್ನು ಮಂತ್ರವಾದಿ ಬಳಿಗೆ ಕರೆದೊಯ್ಯದೆ ವೈದ್ಯರಲ್ಲಿ ಕರೆದುಕೊಂಡು ಹೋಗಿದ್ದರೆ, ಬದುಕುಳಿಯುತ್ತಿದ್ದರು. ವಾಮಾಚಾರದ ನಂಬಿಕೆಗಳಿಂದ ದೂರ ಇರುವಂತೆ ನಾನು ಗ್ರಾಮಸ್ತರಲ್ಲಿ ಆಗ್ರಹಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News