ದಿಲ್ಲಿ ಸಿಎಂ ಆಗಿ ಅರವಿಂದ ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ

Update: 2020-02-16 18:10 GMT

ಹೊಸದಿಲ್ಲಿ, ಫೆ.16: ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ದಿಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿಂದಿನ ಸಚಿವ ಸಂಪುಟದಲ್ಲಿದ್ದ ಆರು ಸಚಿವರು ನೂತನ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ದಿಲ್ಲಿಯ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಪ್ರಮಾಣ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಆಪ್ ಮುಖಂಡರಾದ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರಪಾಲ್ ಗೌತಮ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪಕ್ಷದ ಧ್ವಜ, ಪೋಸ್ಟರ್, ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡಿದ್ದ ಆಪ್‌ನ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಕೇಜ್ರೀವಾಲ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ದಿಲ್ಲಿ ನಿರ್ಮಾಣಕ್ಕೆ ಕಾರಣರಾದ 50 ಮಂದಿ ವಿಶೇಷ ಅತಿಥಿಗಳಾಗಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕೇಜ್ರೀವಾಲರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ದಿಲ್ಲಿಯ ಪ್ರಸಿದ್ದ ಸಿಗ್ನೇಚರ್ ಬ್ರಿಡ್ಜ್‌ನ ವಿನ್ಯಾಸಕಾರರು, ಶಿಕ್ಷಕರು, ಬಸ್ ಮಾರ್ಷಲ್‌ಗಳು, ನೈರ್ಮಲ್ಯ ಕೆಲಸಗಾರರು ಹಾಗೂ ಅಗ್ನಿಶಾಮಕ ದಳ ಸಿಬಂದಿಗಳ ಕುಟುಂಬದ ಒಟ್ಟು 50 ಮಂದಿಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳುವ ಗೌರವ ದೊರಕಿದೆ. ಬಳಿಕ ಮಾತನಾಡಿದ ಕೇಜ್ರೀವಾಲ್, ದಿಲ್ಲಿಯ ಎರಡು ಕೋಟಿ ಜನರೇ ತನ್ನ ಕುಟುಂಬವಾಗಿದ್ದಾರೆ. ದಿಲ್ಲಿಯನ್ನು ಸುಂದರಗೊಳಿಸಲು ಇನ್ನಷ್ಟು ಕೆಲಸ ಮಾಡಬೇಕಿದೆ ಎಂದರು.

► ಪ್ರಮಾಣ ವಚನ ಸ್ವೀಕರಿಸಿದ 6 ಸಚಿವರು

ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ಶಿಫಾರಸಿನ ಮೇರೆಗೆ ದಿಲ್ಲಿಯ ಸಚಿವ ಸಂಪುಟಕ್ಕೆ 6 ಶಾಸಕರನ್ನು ಸಚಿವರನ್ನಾಗಿ ರಾಷ್ಟ್ರಪತಿ ನೇಮಿಸಿದ್ದಾರೆ. ನೂತನ ಶಾಸಕರ ವಿವರ:

ಮನೀಷ್ ಸಿಸೋಡಿಯಾ: ಜರ್ನಲಿಸಂನಲ್ಲಿ ಡಿಪ್ಲೊಮಾ ಮಾಡಿರುವ ಸಿಸೋಡಿಯಾ ಕೆಲ ಸಮಯ ಪತ್ರಕರ್ತರಾಗಿಯೂ ಕಾರ್ಯ ನಿರ್ವಹಿಸಿದ್ದರು. 2006ರಿಂದಲೂ ಕೇಜ್ರಿವಾಲರ ನಿಕಟವರ್ತಿಯಾಗಿದ್ದಾರೆ.

ಸತ್ಯೇಂದರ್ ಜೈನ್ ವಾಸ್ತುಶಿಲ್ಪ ಪದವೀಧರನಾಗಿದ್ದು, ಈ ಹಿಂದೆ ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯನಾಗಿರುವ ಜೈನ್ 2013 ಮತ್ತು 2015ರ ಸರಕಾರದಲ್ಲಿಯೂ ಸಚಿವರಾಗಿದ್ದು ದಿಲ್ಲಿ ನಗರಾದ್ಯಂತ ಮೊಹಲ್ಲಾ ಕ್ಲಿನಿಕ್ ಸ್ಥಾಪನೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತಂದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಗೋಪಾಲ ರಾಯ್ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. 2015ರಲ್ಲಿಯೂ ಸಚಿವರಾಗಿದ್ದರು.

ರಾಜೇಂದ್ರ ಪಾಲ್ ಗೌತಮ್ ಕಾನೂನು ಪದವೀಧರನಾಗಿದ್ದು ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು. 2015ರಲ್ಲಿಯೂ ಶಾಸಕರಾಗಿ ಆಯ್ಕೆಯಾಗಿದ್ದರು.

ಕೈಲಾಶ್ ಗೆಹ್ಲೋಟ್: ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಗೆಹ್ಲೋಟ್, ಸುಪ್ರೀಂಕೋರ್ಟ್ ಮತ್ತು ದಿಲ್ಲಿ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ 16 ವರ್ಷ ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿಯೂ ಶಾಸಕರಾಗಿ ಆಯ್ಕೆಯಾಗಿದ್ದರು.

ಇಮ್ರಾನ್ ಹುಸೈನ್: ಜಾಮಿಯಾ ಮಿಲ್ಲಿಯಾ ವಿವಿಯಿಂದ ವ್ಯವಹಾರ ಅಧ್ಯಯನ ಪದವಿ ಪಡೆದಿದ್ದು 2015ರಲ್ಲಿಯೂ ಶಾಸಕರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News