​ಭಾರತದ ಜಿಎಸ್‌ಟಿ ಸಂಗ್ರಹ ನೈಜ ಸಾಮರ್ಥ್ಯಕ್ಕಿಂತ ಕಡಿಮೆ: ಐಎಂಎಫ್

Update: 2020-02-17 04:15 GMT

ಹೊಸದಿಲ್ಲಿ, ಫೆ.17: ಬಹುಹಂತದ ದರ ನಿಗದಿ, ವಿನಾಯ್ತಿ ಮತ್ತು ಅನುಷ್ಠಾನದ ಸವಾಲು ಮತ್ತಿತರ ಅಂಶಗಳು ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದ ಮೇಳೆ ಪರಿಣಾಮ ಬೀರಿವೆ ಎಂಧು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಭಿಪ್ರಾಯಪಟ್ಟಿದೆ.

ಮುಂದಿನ ಐದು ವರ್ಷಗಳಲ್ಲಿ ಭಾರತದ ಸಂಪನ್ಮೂಲ ಕ್ರೋಢೀಕರಣ ಕುರಿತ ಅಧ್ಯಯನದ ಪ್ರಕಾರ, ಜಿಎಸ್‌ಟಿ ಸಂಗ್ರಹವನ್ನು 2018-19ರ ಅವಧಿಯಲ್ಲಿ ಒಟ್ಟು ಜಿಡಿಪಿಯ 5.8% ಎಂದು ಅಂದಾಜಿಸಲಾಗಿತ್ತು. ಇದು ಇತರ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಉತ್ತಮ. ಆದರೆ ಭಾರತದ ಜಿಡಿಪಿಯ 8.2%ದಷ್ಟು ಸಂಗ್ರಹಕ್ಕೆ ಅವಕಾಶವಿದ್ದು, ಹೊಸ ವ್ಯವಸ್ಥೆಯನ್ನು ಇನ್ನೂ ಸಮರ್ಥವಾಗಿ ಬಳಸಿಕೊಂಡಿಲ್ಲ.

"ಸರ್ಕಾರದ ಆದೇಶಕ್ಕೆ ಅನುಸಾರವಾಗಿ ತೆರಿಗೆ ಪಾವತಿಸುವವರ ಪ್ರಮಾಣ ಹಾಗೂ ವಾಸ್ತವವಾಗಿ ತೆರಿಗೆ ಬದ್ಧತೆಯಲ್ಲಿ ಶೇಕಡ 40ರಷ್ಟು ಅಂತರ ಇದೆ" ಎಂದು ರೂಡ್ ಡೇ ಮೂಜಿಲ್, ಅರವಿಂದ್ ಮೋದಿ, ಲಿ ಲೂಯಿ, ದಿನಾರ್ ಪ್ರಿಹಾರ್ದಿನಿ ಮತ್ತು ಜಾನ್ ಕಾರ್ಲೋಸ್ ಬೆನಿಟ್ಸ್ ಅವರನ್ನೊಳಗೊಂಡ ತಂಡ ಅಭಿಪ್ರಾಯಪಟ್ಟಿದೆ.

ವಾಸ್ತವ ಸಂಗ್ರಹ ಮತ್ತು ಸಂಗ್ರಹ ಸಾಧ್ಯತೆ ನಡುವಿನ ಅಂತರಕ್ಕೆ ಹಲವು ಕಾರಣಗಳಿವೆ. ಆಹಾರ ಧಾನ್ಯದ ಮೇಲೆ ತೆರಿಗೆ ವಿನಾಯ್ತಿ ನೀಡಿರುವುದು ಕಳವಳಕಾರಿ ಅಂಶ. ಆಹಾರಧಾನ್ಯಕ್ಕೆ ವಿನಾಯ್ತಿ ನೀಡಿರುವ ಕಾರಣದಿಂದಲೇ ಒಟ್ಟು ಜಿಡಿಪಿಯ ಶೇಕಡ 0.4ರಷ್ಟು ನಷ್ಟವಾಗುತ್ತಿದೆ. ಈ ಸಮಸ್ಯೆ ನಿವಾರಿಸುವ ಸಲುವಾಗಿ ಕೆಳಹಂತದ ನಾಗರಿಕರಿಗೆ ನೇರ ಪ್ರಯೋಜನ ವರ್ಗಾವಣೆಯನ್ನು ಆರಂಭಿಸಬಹುದಾಗಿದೆ ಎಂದು ಸಲಹೆ ಮಾಡಿದೆ.

ವಾಸ್ತವವಾಗಿ ಆಹಾರ ಉತ್ಪನ್ನಗಳ ಮೇಲಿನ ವಿನಾಯ್ತಿ ದುರ್ಬಳಕೆಯಾಗುತ್ತಿದ್ದು, ಬಾಸ್ಮತಿ ಅಕ್ಕಿ ಕಂಪೆನಿಗಳು ತೆರಿಗೆ ತಪ್ಪಿಸುವ ಸಲುವಾಗಿ ತಮ್ಮ ಬ್ರಾಂಡ್‌ಗಳ ನೋಂದಣಿ ರದ್ದುಮಾಡುತ್ತಿವೆ ಎಂದು ಸರ್ಕಾರ ನೇಮಕ ಮಾಡಿದ ಉನ್ನತ ಮಟ್ಟದ ಸಮಿತಿಯೂ ಶಿಫಾರಸು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News