ನ್ಯೂಝಿಲ್ಯಾಂಡ್‌ಗೆ ಟ್ರೆಂಟ್ ಬೌಲ್ಟ್ ವಾಪಸ್

Update: 2020-02-17 18:40 GMT

ವೆಲ್ಲಿಂಗ್ಟನ್, ಫೆ.17: ಕೈ ಮುರಿತದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಭಾರತ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ನ್ಯೂಝಿಲ್ಯಾಂಡ್‌ನ 13 ಸದಸ್ಯರುಗಳನ್ನು ಒಳಗೊಂಡ ತಂಡಕ್ಕೆ ವಾಪಸಾಗಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಕಿವೀಸ್ ಪಡೆ ಸೋತಿರುವ ಹಿನ್ನೆಲೆಯಲ್ಲಿ ಓಪನರ್ ಜೀತ್ ರಾವಲ್, ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಹಾಗೂ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಎಡಗೈ ಸ್ಪಿನ್ನರ್ ಅಜಾಝ್ ಪಟೇಲ್‌ಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ಪ್ರವಾಸದಲ್ಲಿ ಪಟೇಲ್ ಕೊನೆಯ ಬಾರಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆಕ್ಲೆಂಡ್‌ನ ವೇಗದ ಬೌಲರ್ ಕೈಲ್ ಜಮೀಸನ್ ಅವರು ಗಾಯಗೊಂಡಿರುವ ಲಾಕಿ ಫರ್ಗ್ಯುಸನ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಎಡಗೈ ವೇಗಿ ಬೌಲ್ಟ್ ಬಲಗೈಗೆ ಗಾಯವಾಗಿತ್ತು. ಆದರೆ, ಇದೀಗ ಅವರು ಶುಕ್ರವಾರದಿಂದ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗಿದ್ದಾರೆ.

ಭಾರತ ವಿರುದ್ಧ 2 ಪಂದ್ಯಗಳ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಜಮೀಸನ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಟಾಮ್ ಬ್ಲಂಡೆಲ್ ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ ರನ್‌ಗಾಗಿ ಪರದಾಡುತ್ತಿದ್ದ ರಾವಲ್ ಬದಲಿಗೆ ಆಯ್ಕೆಯಾಗಿದ್ದಾರೆ. ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದ ಟೆಸ್ಟ್ ಆಲ್‌ರೌಂಡರ್ ಡರಿಲ್ ಮಿಚೆಲ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News