ಇಂಗ್ಲೆಂಡ್ ಮಡಿಲಿಗೆ ಟ್ವೆಂಟಿ -20 ಸರಣಿ

Update: 2020-02-17 18:42 GMT

ಸೆಂಚೂರಿಯನ್, ಫೆ.17: ನಾಯಕ ಇಯಾನ್ ಮೊರ್ಗನ್ ಅರ್ಧಶತಕದ ಕೊಡುಗೆಯ ಬೆಂಬಲದಿಂದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಐದು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

 ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸತತ ಎರಡನೇ ಸರಣಿ ವಶಪಡಿಸಿಕೊಂಡಿತು. ಟೆಸ್ಟ್ ಸರಣಿಯನ್ನು ಜಯಿಸಿದ್ದ ಇಂಗ್ಲೆಂಡ್ ರೋಚಕವಾಗಿ ಸಾಗಿದ್ದ ಟ್ವೆಂಟಿ-20 ಸರಣಿಯನ್ನು ಬಾಚಿಕೊಂಡಿದೆ. ಈ ಮೂಲಕ ಎರಡು ಮಾದರಿಯ ಕ್ರಿಕೆಟ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದೆ.

ರವಿವಾರ ಇಲ್ಲಿ ನಡೆದ ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 222 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಇಂಗ್ಲೆಂಡ್ ತಂಡ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮೊರ್ಗನ್ ನೆರವಿನಿಂದ 19.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ಗೆಲುವಿನ ದಡ ಸೇರಿತು. ಈ ಸಾಹಸಕ್ಕೆ ಮೊರ್ಗನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾದ ನಾಯಕ ಕ್ವಿಂಟನ್ ಡಿಕಾಕ್, ತನ್ನ ತಂಡ ದೊಡ್ಡ ಮೊತ್ತ ಗಳಿಸಿ ಎದುರಾಳಿ ತಂಡಕ್ಕೆ ಒತ್ತಡ ಹೇರಲು ಯತ್ನಿಸಲಿದೆ ಎಂದು ಹೇಳಿದ್ದರು. ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ್ದ ತಂಡ ಈ ವರೆಗೆ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ಜಯಿಸಿಲ್ಲ. ಹೀಗಾಗಿ ಡಿಕಾಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ದ.ಆಫ್ರಿಕಾ ತಂಡ ಸೆಂಚೂರಿಯನ್‌ನಲ್ಲಿ ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿ ಉತ್ತಮ ದಾಖಲೆ ಹೊಂದಿತ್ತು. ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ 2 ರನ್‌ನಿಂದ ರೋಚಕ ಜಯ ಸಾಧಿಸಿದ್ದ ಇಂಗ್ಲೆಂಡ್ ಸರಣಿ ಸಮಬಲಗೊಳಿಸಿತ್ತು. ರವಿವಾರ ಗೆಲ್ಲುವ ವಿಶ್ವಾಸದೊಂದಿಗೆ ಮೂರನೇ ಪಂದ್ಯಕ್ಕೆ ಸಜ್ಜಾಗಿತ್ತು. ನಾಯಕನ ಮಾತನ್ನು ಉಳಿಸಿಕೊಂಡ ದಕ್ಷಿಣ ಆಫ್ರಿಕಾದ ಆಟಗಾರರು ಸ್ಪರ್ಧಾತ್ಮಕ ಸ್ಕೋರನ್ನು ಕಲೆ ಹಾಕಿದರು. ಇನಿಂಗ್ಸ್ ಆರಂಭಿಸಿದ ಬವುಮಾ(49, 24 ಎಸೆತ, 4 ಬೌಂಡರಿ,3 ಸಿಕ್ಸರ್)ಹಾಗೂ ಡಿಕಾಕ್(35, 24 ಎಸೆತ, 1 ಬೌಂಡರಿ,4ಸಿಕ್ಸರ್)ಮೊದಲ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಆರಂಭಿಕ ಆಟಗಾರರಾದ ಬವುಮಾ, ಡಿಕಾಕ್ ಹಾಗೂ ವಾನ್‌ಡರ್ ಡುಸ್ಸಾನ್ ಬೆನ್ನುಬೆನ್ನಿಗೆ ಔಟಾದಾಗ ದಕ್ಷಿಣ ಆಫ್ರಿಕಾದ ಸ್ಕೋರ್ 3ಕ್ಕೆ 113. ಡೇವಿಡ್ ಮಿಲ್ಲರ್(ಔಟಾಗದೆ 35, 20 ಎಸೆತ, 3 ಬೌಂಡರಿ,2 ಸಿಕ್ಸರ್)ಅವರೊಂದಿಗೆ 4ನೇ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದ ಹೆನ್ರಿಕ್ ಕ್ಲಾಸೆನ್(66, 33 ಎಸೆತ, 4 ಬೌಂಡರಿ,4 ಸಿಕ್ಸರ್)ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು. ಔಟಾಗದೆ 35 ರನ್ ಗಳಿಸಿದ ಮಿಲ್ಲರ್ ತಂಡದ ಮೊತ್ತವನ್ನು 200ರ ಗಡಿ ದಾಟಲು ನೆರವಾದರು.

ಇಂಗ್ಲೆಂಡ್‌ನ ಪರ ಕರನ್(2-33)ಹಾಗೂ ಸ್ಟೋಕ್ಸ್(2-35)ತಲಾ ಎರಡು ವಿಕೆಟ್ ಪಡೆದರು.

ಗೆಲ್ಲಲು ಕಠಿಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೈರ್‌ಸ್ಟೋವ್(64, 34 ಎಸೆತ, 7 ಬೌಂಡರಿ,3 ಸಿಕ್ಸರ್)ಹಾಗೂ ಜೋಸ್ ಬಟ್ಲರ್(57,29 ಎಸೆತ, 9 ಬೌಂಡರಿ,2 ಸಿಕ್ಸರ್)ಎರಡನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಮೊರ್ಗನ್(ಔಟಾಗದೆ 57, 22 ಎಸೆತ, 7 ಸಿಕ್ಸರ್)ಆಲ್‌ರೌಂಡರ್ ಬೆನ್ ಸ್ಟೋಕ್ಸ್(22, 12 ಎಸೆತ, 1 ಬೌಂಡರಿ,2 ಸಿಕ್ಸರ್)5ನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ದಕ್ಷಿಣ ಆಫ್ರಿಕಾದ ಪರ ಲುಂಗಿ ಗಿಡಿ ದುಬಾರಿ ಬೌಲರ್ ಎನಿಸಿದರೂ (2-55)ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News