ವಿಶ್ವ ಚೆಸ್ ಚಾಂಪಿಯನ್ ಕೊನೆರು ಹಂಪಿಗೆ ಕೈರ್ನ್ಸ್ ಕಪ್

Update: 2020-02-17 18:46 GMT

ಸೈಂಟ್ ಲೂಯಿಸ್(ಅಮೆರಿಕ), ಫೆ.17: ವಿಶ್ವ ರ್ಯಾಪಿಡ್ ಚಾಂಪಿಯನ್ ಕೊನೆರು ಹಂಪಿ ಅವರು ಕೈರ್ನ್ಸ್ ಕಪ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಚೆಸ್ ವಿಶ್ವ ಶ್ರೇಯಾಂಕದಲ್ಲಿ 2ನೇ ಸ್ಥಾನವನ್ನು ಮರಳಿ ಪಡೆದುಕೊಂಡಿದ್ದಾರೆ.

9ನೇ ಮತ್ತು ಅಂತಿಮ ಸುತ್ತಿನಲ್ಲಿ ಹಂಪಿ ಅವರು ತನ್ನ ಎದುರಾಳಿ ದ್ರೋಣವಲ್ಲಿ ಹರಿಕಾ ಜೊತೆ ಡ್ರಾ ಸಾಧಿಸಿ ಎರಡು ತಿಂಗಳ ಅವಧಿಯಲ್ಲಿ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

2019ರ ಡಿಸೆಂಬರ್ ಕೊನೆಯ ವಾರದಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಹಂಪಿ 6 ಅಂಕಗಳೊಂದಿಗೆ ಪಂದ್ಯಾವಳಿಯನ್ನು ಮುಗಿಸಿದ್ದರು.

''ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ'' ಎಂದು ಹಂಪಿ ಪಿಟಿಐಗೆ ತಿಳಿಸಿದರು.

   ಪ್ರಶಸ್ತಿ ಗೆಲ್ಲಲು 32 ವರ್ಷದ ಹಂಪಿಗೆ ಕೊನೆಯ ಸುತ್ತನ್ನು ಡ್ರಾ ಅಥವಾ ಟೈಯೊಂದಿಗೆ ಮುಗಿಸಬೇಕಾಗಿತ್ತು. ಹರಿಕಾ ವಿರುದ್ಧ ಸುಲಭವಾಗಿ ಹಂಪಿ ಡ್ರಾ ಸಾಧಿಸಿದರು. ಇದುವರೆಗಿನ ಪ್ರಬಲ ಪಂದ್ಯಾವಳಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಹಂಪಿ 45,000 ಯುಎಸ್ ಡಾಲರ್ ಮೊತ್ತದ ನಗದು ಬಹುಮಾನ ಪಡೆದರು.

 ವಿಶ್ವ ಚಾಂಪಿಯನ್ ವೆಂಜುನ್ ಜು (5.5 ಅಂಕ) ಅವರು ರಶ್ಯದ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ (5 ಅಂಕಗಳು) ವಿರುದ್ಧ ಅಂತಿಮ ಸುತ್ತಿನ ಪಂದ್ಯವನ್ನು ಗೆದ್ದ ನಂತರ ಎರಡನೇ ಸ್ಥಾನ ಪಡೆದರು. ಕೊಸ್ಟೆನಿಯುಕ್ ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ಮತ್ತು ಹರಿಕಾ (4.5 ಅಂಕ)ಐದನೇ ಸ್ಥಾನದೊಂದಿಗೆ ತಮ್ಮ ಅಭಿಯಾನ ಕೊನೆಗೊಳಿಸಿದರು.

''ಕೈರ್ನ್ಸ್ ಕಪ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧದ ಪಂದ್ಯವು ಅತ್ಯಂತ ಕಠಿಣವಾಗಿತ್ತು. ಐದು ಪಂದ್ಯಗಳಲ್ಲಿ ಅವರ ವಿರುದ್ಧ ನನ್ನ ಅಜೇಯ ದಾಖಲೆಯನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡಿತು'' ಎಂದು ಹಂಪಿ ಹೇಳಿದರು.

         ಹಂಪಿ ಮುಂದಿನ ಮೇ ತಿಂಗಳಲ್ಲಿ ಇಟಲಿಯ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ, ಇದು ಅವರ ಮುಂದಿನ ಪ್ರಮುಖ ಇವೆಂಟ್ ಆಗಿದೆ. ಇಟಲಿಯ ಗ್ರ್ಯಾಂಡ್ ಪ್ರಿ ಮುಗಿದ ಬಳಿಕ ಭಾರತದ ಪಿಎಸ್ಪಿಬಿ ಪಂದ್ಯಾವಳಿಯಲ್ಲಿ ಆಡಲಿರುವುದಾಗಿ ಅವರು ಹೇಳಿದರು. ಹಂಪಿ ಅಮೆರಿಕದ 16ರ ಹರೆಯದ ಕ್ಯಾರಿಸ್ಸಾ ಯಿಪ್ ವಿರುದ್ಧ ಜಯ ಗಳಿಸುವುದರೊಂದಿಗೆ ಅಭಿಯಾನ ಆರಂಭಿಸಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಮರಿಯಾ ಮುಝಿಚುಕ್ ವಿರುದ್ಧ ಸೋಲನ್ನು ಅನುಭವಿಸಿದರು. ವಿಶ್ವ ಚಾಂಪಿಯನ್ ವೆಂಜುನ್ ಜು ವಿರುದ್ಧ ಮೇಲುಗೈ ಸಾಧಿಸಿದ್ದರು. ನಾನಾ ಝಾಗ್ನಿಡ್ಜ್ ಮತ್ತು ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ಅವರಂತಹ ಆಟಗಾರ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಅಂತಿಮ ಸುತ್ತಿನಲ್ಲಿ ವ್ಯಾಲೆಂಟಿನಾ ಗುನಿನಾ ವಿರುದ್ಧದ ಗೆಲುವು ಅವರಿಗೆ ಪ್ರಶಸ್ತಿ ಗೆಲ್ಲಲು ನೆರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News