ಸಚಿನ್ ತೆಂಡುಲ್ಕರ್‌ಗೆ ಲಾರಿಯಸ್ ಪ್ರಶಸ್ತಿ

Update: 2020-02-18 05:59 GMT
Photo: facebook.com/SachinTendulkar

ಬರ್ಲಿನ್, ಫೆ.18:   ಭಾರತ 2011ರಲ್ಲಿ ತವರು ನೆಲದಲ್ಲಿ ವಿಶ್ವಕಪ್ ಜಯಿಸಿದಾಗ ಸಹ ಆಟಗಾರರು ಸಚಿನ್ ತೆಂಡುಲ್ಕರ್ ಅವರನ್ನು ಭುಜದ ಮೇಲೆ ಎತ್ತಿಕೊಂಡು ಸಂಭ್ರಮಿಸಿರುವ ಕ್ಷಣ ಕಳೆದ 20 ವರ್ಷಗಳಲ್ಲಿ ಲಾರಿಯಸ್‌ನ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿಗೆ ಆಯ್ಕೆಯಾಗಿದೆ.

 ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬೆಂಬಲದಿಂದ ಗರಿಷ್ಠ ಮತಗಳನ್ನು ಪಡೆದ ತೆಂಡುಲ್ಕರ್ ಸೋಮವಾರ ಲಾರಿಯಸ್ ಪ್ರಶಸ್ತಿಗೆ ಆಯ್ಕೆಯಾದರು. 2011ರಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ನಾಯಕ ಎಂಎಸ್ ಧೋನಿ ಶ್ರೀಲಂಕಾದ ವೇಗದ ಬೌಲರ್ ನುವಾನ್ ಕುಲಸೇಕರ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಆರನೇ ಹಾಗೂ ಕೊನೆಯ ವಿಶ್ವಕಪ್‌ನಲ್ಲಿ ಆಡಿದ್ದ ತೆಂಡುಲ್ಕರ್ ಅವರ ವಿಶ್ವಕಪ್ ಗೆಲ್ಲಬೇಕೆಂಬ ಸುದೀರ್ಘ ಕನಸು ಕೊನೆಗೂ ಈಡೇರಿತ್ತು.

 ಭಾರತ ವಿಶ್ವಕಪ್ ಗೆದ್ದ ತಕ್ಷಣ ಸಹ ಆಟಗಾರರು ಮೈದಾನದೊಳಗೆ ಧಾವಿಸಿ ಬಂದು ತೆಂಡುಲ್ಕರ್‌ರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಗೌರವ ನೀಡಿದರು. ಈ ಕ್ಷಣ ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದೆ.

 ಸೋಮವಾರ ನಡೆದ ಭವ್ಯ ಸಮಾರಂಭದಲ್ಲಿ ಟೆನಿಸ್ ದಂತಕತೆ ಬ್ರೊಸ್ ಬೆಕೆರ್ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದ್ದು, ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ವಾ ಅವರು ತೆಂಡುಲ್ಕರ್‌ಗೆ ಟ್ರೋಫಿಯನ್ನು ಹಸ್ತಾಂತರಿಸಿದರು.

‘‘ಇದೊಂದು ಅದ್ಭುತ. ವಿಶ್ವಕಪ್ ಗೆದ್ದ ಕ್ಷಣ ಅನುಭವವನ್ನು ವರ್ಣಿಸಲು ಶಬ್ದಗಳೇ ಸಿಗುವುದಿಲ್ಲ. ತುಂಬಾ ಅಪರೂಪವೆಂಬಂತೆ ಇಡೀ ದೇಶವೇ ವಿಶ್ವಕಪ್ ಗೆದ್ದ ಸಂಭ್ರಮವನ್ನು ಆಚರಿಸಿತ್ತು’’ ಎಂದು  ಟ್ರೋಫಿ ಸ್ವೀಕರಿಸಿದ ಬಳಿಕ ತೆಂಡುಲ್ಕರ್ ಪ್ರತಿಕ್ರಿಯಿಸಿದರು. ವಿಶ್ವ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿರುವ 46ರ ಹರೆಯದ ತೆಂಡುಲ್ಕರ್, ಲಾರಿಯಸ್ ಟ್ರೋಫಿಯನ್ನು ಎತ್ತಿ ಹಿಡಿದಿರುವುದು ಮಹಾ ಗೌರವ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News