ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ

Update: 2020-02-19 05:08 GMT

  ಬ್ರಿಸ್ಬೇನ್, ಫೆ.18: ಸ್ಪಿನ್ನರ್ ಪೂನಮ್ ಯಾದವ್ ಪ್ರಹಾರದ ನೆರವಿನಲ್ಲಿ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಭಾರತ ಎರಡು ರನ್‌ಗಳ ರೋಚಕ ಗೆಲುವು ಸಾಧಿಸಿದೆ.

  ಮಂಗಳವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್  ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 107 ರನ್ ಗಳಿಸಿತ್ತು. ಗೆಲುವಿಗೆ 108 ರನ್‌ಗಳ ಸವಾಲನ್ನು ಪಡೆದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 105 ರನ್ ಗಳಿಸಿತು.

  ಪೂನಮ್ ಯಾದವ್ ದಾಳಿಗೆ ಸಿಲುಕಿದ ವೆಸ್ಟ್‌ಇಂಡೀಸ್ ಗೆಲುವಿನ ದಡ ಸೇರುವಲ್ಲಿ ವಿಫಲವಾಯಿತು. ಲೀ ಆನ್ ಕಿರ್ಬಿ 42 ರನ್ ಗಳಿಸಿದರು. ಹೇಲಿ ಮ್ಯಾಥ್ಯೂಸ್ (25) ,ಚಿನೆಲ್ಲೆ ಹೆನ್ರಿ (17), ನಾಯಕಿ ಸ್ಟಫಾನಿ ಟೇಲರ್ (16) ಎರಡಂಕೆಯ ಸ್ಕೋರ್ ದಾಖಲಿಸಿದರು.

     19ನೇ ಓವರ್‌ನಲ್ಲಿ ಹೇಲಿ ಮ್ಯಾಥ್ಯೂಸ್ ಮತ್ತು ಚಿನೆಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 19 ರನ್ ಕಲೆ ಹಾಕಿದರು.ಕೊನೆಯ ಓವರ್‌ನಲ್ಲಿ ಗೆಲುವಿಗೆ 11 ರನ್ ಮಾಡಬೇಕಿತ್ತು.ಪೂನಮ್ ಯಾದವ್ ಕೇವಲ 8 ರನ್ ಬಿಟ್ಟುಕೊಟ್ಟರು.

ಇದಕ್ಕೂ ಮುನ್ನ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿತ್ತು. ಭಾರತ 3.1 ಓವರ್‌ಗಳಲ್ಲಿ 17 ರನ್ ಗಳಿಸುವಷ್ಟರಲ್ಲಿ ಅಗ್ರ ಸರದಿಯ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ (4) ಜೆಮಿಮಾ ರೋಡ್ರಿಗಸ್ (0) ಮತ್ತು ಶೆಫಾಲಿ ವರ್ಮಾ ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ (11) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ದೀಪ್ತಿ ಶರ್ಮಾ 32 ಎಸೆತಗಳಲ್ಲಿ 21 ರನ್ ಗಳಿಸಿದರೆ, ಪೂಜಾ ವಸ್ತ್ರಕರ್ 13 ರನ್ ಗಳಿಸಿದರು. ಶಿಖಾ ಪಾಂಡೆ 16 ಎಸೆತಗಳಲ್ಲಿ 24 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ದಾಖಲಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News