​ಜರ್ಮನಿಯಲ್ಲಿ ಶೂಟೌಟ್: 8 ಮಂದಿ ಮೃತ್ಯು

Update: 2020-02-20 03:39 GMT

ಬರ್ಲಿನ್, ಫೆ.20: ಜರ್ಮನಿಯ ಹನವ್ ನಗರದಲ್ಲಿ ಬುಧವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.
ಎರಡು ಹುಕ್ಕಾ ಲಾಂಜ್‌ಗಳನ್ನು ಗುರಿ ಮಾಡಿ ರಾತ್ರಿ 10ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಕೋರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಈ ಬಗ್ಗೆ ಪೊಲೀಸ್ ಇಲಾಖೆ ಅಧಿಕೃತ ಹೇಳಿಕೆ ನೀಡಿದ್ದರೂ, ಸಂತ್ರಸ್ತರ ಬಗ್ಗೆ ಯಾವ ವಿವರಗಳೂ ಇಲ್ಲ. ದಾಳಿಯ ಉದ್ದೇಶ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ. ಒಂದು ಲಾಂಜ್‌ನಲ್ಲಿ ಗುಂಡಿನ ಸದ್ದು ಕೇಳಿಸಿದ ಬಳಿಕ ಒಂದು ಕಡುಬಣ್ಣದ ವಾಹನ ಕಂಡುಬಂದಿದೆ. ಬಳಿಕ ಮತ್ತೊಂದು ಕಡೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ನಗರದ ಕೇಂದ್ರಭಾಗದಲ್ಲಿರುವ ಹುಕ್ಕಾ ಲಾಂಜ್‌ನಲ್ಲಿ ಈ ದಾಳಿ ನಡೆದಿದೆ. ಎಂಟು- ಒಂಬತ್ತು ಸುತ್ತು ಗುಂಡು ಹಾರಾಟ ಕೇಳಿಸಿದ್ದು, ಗುಂಡೇಟಿನಿಂದ ಜನ ಬಿದ್ದಿರುವುದನ್ನು ಕಂಡಿದ್ದಾಗಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪ್ರಾದೇಶಿಕ ಸಾರ್ವಜನಿಕ ಪ್ರಸಾರ ಅಧಿಕಾರಿ ಹೆಶೆರ್ ರುಂಡ್‌ಫಂಕ್ ವಿವರಿಸಿದ್ದಾರೆ.

ಒಂದೆಡೆ ದಾಳಿ ಮಾಡಿದ ದಾಳಿಕೋರರು ನಗರದ ಮತ್ತೊಂದು ಕಡೆಗೆ ತೆರಳಿ ಅಲ್ಲಿನ ಹುಕ್ಕಾ ಲಾಂಜ್‌ನಲ್ಲಿ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹನವ್ ನಗರ ಜರ್ಮನಿಯ ನೈರುತ್ಯದಲ್ಲಿದ್ದು, ಫ್ರಾಂಕ್‌ಫರ್ಟ್ ನಗರದಿಂದ 20 ಕಿಲೋಮೀಟರ್ ದೂರದಲ್ಲಿದೆ. ನಗರದ ಜನಸಂಖ್ಯೆ ಸುಮಾರು ಒಂದು ಲಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News