ಬೆಂಗಳೂರಿನಿಂದ ಕೇರಳಕ್ಕೆ ಹೊರಟಿದ್ದ ಸರಕಾರಿ ಬಸ್ ಅಪಘಾತ: 19 ಮಂದಿ ಮೃತ್ಯು

Update: 2020-02-20 04:45 GMT

ಕೊಯಂಬತ್ತೂರು, ಫೆ.20: ಕೊಚ್ಚಿ- ಬೆಂಗಳೂರು ನಡುವೆ ಕೇರಳ ಸರಕಾರಿ ಬಸ್ ಮತ್ತು ಕಂಟೇನರ್ ಲಾರಿ ನಡುವೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ 19 ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ತಿರ್ಪೂರು ಜಿಲ್ಲೆಯ ಅವಿನಾಶಿ ಪಟ್ಟಣದ ಬಳಿ ಗುರುವಾರ ಮುಂಜಾನೆ ನಡೆದಿದೆ.

ಅಪಘಾತದಲ್ಲಿ ಐವರು ಮಹಿಳೆಯರು, ಬಸ್ ಚಾಲಕ ಸೇರಿದಂತೆ 14 ಪುರುಷರು ಮೃತಪಟ್ಟಿದ್ದಾರೆ ಎಂದು ಅವಿನಾಶಿ ಉಪ ತಹಶೀಲ್ದಾರ್ ಖಚಿತಪಡಿಸಿದ್ದಾರೆ.

ಬಸ್ ಬೆಂಗಳೂರಿನಿಂದ ಎರ್ನಾಕುಲಂಗೆ ತೆರಳುತ್ತಿತ್ತೆನ್ನಲಾಗಿದೆ. ಕೊಯಂಬತ್ತೂರು- ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು,  ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಕೇರಳ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಕೇರಳ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.

ಮೃತಪಟ್ಟವರಲ್ಲಿ  ಹೆಚ್ಚಿನವರು ಪಾಲಕ್ಕಾಡ್, ತ್ರಿಶೂರ್ ಮತ್ತು ಎರ್ನಾಕುಲಂ ಮೂಲದವರು ಎಂದು ಸಚಿವರು  ಮಾಹಿತಿ ನೀಡಿದ್ದಾರೆ. 

ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಸೌಲಭ್ಯ ನೀಡುವಂತೆ ಕೇರಳ ಸಿಎಂ ಪಿನರಾಯಿ ವಿಜಯನ್ ಅವರು ಪಾಲಕ್ಕಾಡ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಮೃತರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿವೆ. ತಮಿಳುನಾಡು  ಸರಕಾರ  ಮತ್ತು ತಿರುಪುರದ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಸಾಧ್ಯವಿರುವ ಎಲ್ಲ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ  ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News