ಕಾಶ್ಮೀರದ ಬಗ್ಗೆ ವರದಿ ಮಾಡಿದ ಅಹ್ಮರ್ ಖಾನ್‌ ಗೆ ಪ್ರತಿಷ್ಠಿತ ‘ಎಎಫ್‌ಪಿ ಕೇಟ್‌ ವೆಬ್’ ಪ್ರಶಸ್ತಿ

Update: 2020-02-20 16:18 GMT
ಫೋಟೊ ಕೃಪೆ: twitter.com/ahmermkhan

ಶ್ರೀನಗರ, ಫೆ.20: ಕಳೆದ ವರ್ಷ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ವಿಧಿಸಿದ್ದ ನಿರ್ಬಂಧದ ಮಧ್ಯೆಯೂ ಅಲ್ಲಿಯ ವಾಸ್ತವಿಕ ಪರಿಸ್ಥಿತಿಯ ಕುರಿತು ಸಂಪೂರ್ಣ ವರದಿ ಮಾಡಿದ ಸ್ವತಂತ್ರ ಪತ್ರಕರ್ತ ಅಹ್ಮರ್ ಖಾನ್ 2019ರ ಪ್ರತಿಷ್ಠಿತ ‘ಎಎಫ್‌ಪಿ ಕೇಟ್‌ ವೆಬ್ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

2,31,793 ರೂ. ನಗದು ಪುರಸ್ಕಾರವನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಏಶ್ಯಾದಲ್ಲಿ ಅಪಾಯಕಾರಿ ಅಥವಾ ಕಠಿಣ ಪರಿಸ್ಥಿತಿಯ ಮಧ್ಯೆಯೂ ಕೆಲಸ ನಿರ್ವಹಿಸುವ ಪತ್ರಕರ್ತರಿಗೆ ನೀಡಲಾಗುತ್ತದೆ. ಈ ವರ್ಷದ ಅಂತ್ಯದಲ್ಲಿ ಹಾಂಕಾಂಗ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಖಾನ್ ಜಮ್ಮು ಕಾಶ್ಮೀರದಲ್ಲಿ ವಿಧಿಸಿದ್ದ ನಿರ್ಬಂಧದದಿಂದ ಸ್ಥಳೀಯರ ಮೇಲೆ ಆಗಿರುವ ಪರಿಣಾಮದ ಕುರಿತು ವೀಡಿಯೊ ಸಹಿತ ವರದಿ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರಕಾರ ಇಂಟರ್‌ನೆಟ್ ಮೇಲೆ ನಿರ್ಬಂಧ ವಿಧಿಸಿತ್ತು. ಜೊತೆಗೆ ಕರ್ಫ್ಯೂ ಹೇರಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿತ್ತು. ಈ ಸಂದರ್ಭದಲ್ಲಿ ಅಲ್ಲಿ ನೆಲೆಸಿದ್ದ ಉದ್ವಿಗ್ನತೆ, ಸ್ಥಳೀಯರ ಮನದಲ್ಲಿದ್ದ ಆತಂಕ, ಹತಾಶೆಯನ್ನು ಖಾನ್ ವೀಡಿಯೊದಲ್ಲಿ ದಾಖಲಿಸಿದ್ದರು.

 ಈ ಸುದ್ದಿಯನ್ನು ರವಾನಿಸಲು ಅವರು ಆಗಿಂದಾಗ್ಗೆ ದಿಲ್ಲಿಗೆ ಪ್ರಯಾಣಿಸಬೇಕಿತ್ತು. ಈ ಪ್ರಶಸ್ತಿ ತನಗೆ ದೊರೆತ ಗೌರವವಾಗಿದ್ದು ಇದನ್ನು ಕಳೆದ 6 ತಿಂಗಳಿನಿಂದ ಕಾಶ್ಮೀರದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯ ಮಧ್ಯೆಯೂ ಕಾರ್ಯ ನಿರ್ವಹಿಸುತ್ತಿರುವ ಕಾಶ್ಮೀರದ ಧೀರ ಪತ್ರಕರ್ತರಿಗೆ ಸಲ್ಲಿಸುತ್ತೇನೆ ಎಂದು ಖಾನ್ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಖ್ಯಾತ ವಿದೇಶಿ ಸುದ್ಧಿಸಂಸ್ಥೆಗಳ ವರದಿಗಾರರ ಸಹಿತ ಎಲ್ಲಾ ಪತ್ರಕರ್ತರಿಗೂ ವರದಿಗಾರಿಕೆ ಅತ್ಯಂತ ಕಠಿಣ ಸವಾಲಾಗಿತ್ತು. ಹೀಗಿರುವಾಗ ಸ್ವತಂತ್ರ ಪತ್ರಕರ್ತರಾಗಿ ಖಾನ್ ನಿರ್ವಹಿಸಿದ ಈ ಕಾರ್ಯ ನಿಜಕ್ಕೂ ಅದ್ಭುತವಾಗಿದೆ ಎಂದು ಎಎಫ್‌ಪಿ ಕೇಟ್‌ವೆಬ್‌ನ ಏಶ್ಯಾ-ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ಫಿಲಿಪ್ ಮ್ಯಾಸನೆಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News