ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವುದು ಸಾಂವಿಧಾನಾತ್ಮಕ ಹೊಣೆಗಾರಿಕೆಯಾಗಿದೆ

Update: 2020-02-21 18:14 GMT

ಮೀಸಲಾತಿಯ ಅನುಷ್ಠಾನದ ಬಗ್ಗೆ ಇತ್ತೀಚೆಗೆ ತಾನು ಕೊಟ್ಟ ಒಂದು ತೀರ್ಮಾನದಿಂದಾಗಿ ಸುಪ್ರೀಂ ಕೋರ್ಟು ಮತ್ತೊಮ್ಮೆ ಸಾರ್ವಜನಿಕ ಆಕ್ಷೇಪಣೆಗೆ ಗುರಿಯಾಗಿದೆ. 2020ರ ಮುಕೇಶ್ ಕುಮಾರ್ ಮತ್ತು ಉತ್ತರಾಖಂಡ್ ಸರಕಾರದ ನಡುವಿನ ಪ್ರಕರಣದಲ್ಲಿ ‘‘ಒಬ್ಬ ವ್ಯಕ್ತಿಯು ತನಗೆ ಭಡ್ತಿಯಲ್ಲಿ ಮೀಸಲಾತಿಯನ್ನು ಆಗ್ರಹಿಸಲು ಅವಕಾಶ ಮಾಡಿಕೊಡುವ ಯಾವುದೇ ಮೂಲಭೂತ ಹಕ್ಕುಗಳಿಲ್ಲ’’ ಎಂಬ ವಿವಾದಾತ್ಮಕ ತೀರ್ಮಾನವನ್ನು ನೀಡಿದೆ. ಇದರಿಂದಾಗಿ ಒಂದು ದೊಡ್ಡ ವಿವಾದವೇ ಸೃಷ್ಟಿಯಾಯಿತಲ್ಲದೆ ಅದು ಸಂಸತ್ತನ್ನೂ ಮುಟ್ಟಿತು ಹಾಗೂ ಸುಪ್ರೀಂ ಆದೇಶವನ್ನು ಅನೂರ್ಜಿತಗೊಳಿಸಲು ಒಂದು ಸಾಂವಿಧಾನಿಕ ತಿದ್ದುಪಡಿಯನ್ನು ತರಬೇಕೆಂದೂ ಆಗ್ರಹಿಸಲಾಯಿತು. ಇದು ಪ್ರಾಯಶಃ ಅತಿರೇಕದ ಪ್ರತಿಕ್ರಿಯೆ. ಏಕೆಂದರೆ ಕೋರ್ಟುಗಳು ಸಮಾಜದ ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ಒಂದು ನಿರ್ದಿಷ್ಟ ಪ್ರಮಾಣದ ಮೀಸಲಾತಿಯನ್ನು ನೀಡಬೇಕೆಂದು ಸರಕಾರಕ್ಕೆ ನಿರ್ದೇಶನ ಮಾಡಲಾಗದೆಂಬುದು ಈಗಾಗಲೇ ಸ್ಥಾಪಿತವಾಗಿರುವ ಶಾಸನಾತ್ಮಕ ತತ್ವವೇ ಆಗಿದ್ದು ಈ ತೀರ್ಮಾನದಲ್ಲೂ ಅದನ್ನೇ ಪುನರುಚ್ಚರಿಸಲಾಗಿದೆ. ಈ ಹೇಳಿಕೆಯನ್ನು ಅದರ ಒಟ್ಟಾರೆ ಸಂದರ್ಭದಲ್ಲಿಟ್ಟು ಓದಿದಾಗ ಅದು ಇನ್ನಷ್ಟು ಸ್ಪಷ್ಟವಾಗುತ್ತದೆ:

    ‘‘ಈ ನ್ಯಾಯಾಲಯವು ಈಗಾಗಲೇ ರೂಪಿಸಿರುವ ಕಾನೂನಿನನ್ವಯ ಸರಕಾರಗಳು ಮೀಸಲಾತಿಯನ್ನು ಒದಗಿಸಲೇಬೇಕೆಂಬ ಕಡ್ಡಾಯವಿಲ್ಲ. ಒಬ್ಬ ವ್ಯಕ್ತಿಯು ಭಡ್ತಿಯಲ್ಲಿ ಮೀಸಲಾತಿಯನ್ನು ಆಗ್ರಹಿಸಲು ಅವಕಾಶ ಮಾಡಿಕೊಡುವ ಯಾವುದೇ ಮೂಲಭೂತ ಹಕ್ಕುಗಳಿಲ್ಲ. ಆದ್ದರಿಂದ ಸರಕಾರವು ಮೀಸಲಾತಿಯನ್ನು ನೀಡಬೇಕೆಂಬ ಆದೇಶವನ್ನು (ಮ್ಯಾಂಡಮಸ್) ಕೊಡಲು ಸಾಧ್ಯವಿಲ್ಲ.’’

ಎಲ್ಲಿ ಶಾಸನಗಳು ಮತ್ತು ಸಂವಿಧಾನವು ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸಿದೆಯೋ ಅಂತಹ ಸಂದರ್ಭಗಳಲ್ಲಿ ಆ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಹಕ್ಕುಗಳನ್ನು ಕೋರ್ಟು ಜಾರಿ ಮಾಡುವಂತೆ ಆದೇಶಿಸುತ್ತದೆ. ಅದೇನೇ ಇದ್ದರೂ, ಒಂದು ನಿರ್ದಿಷ್ಟ ಹಂತದಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಮೀಸಲಾತಿ ಕೊಡುವಂತೆ ಕೋರ್ಟು ಸರಕಾರಕ್ಕೆ ನಿರ್ದೇಶನ ಮಾಡುವಂತೆ ಕೋರುವುದು ಅಪಾಯಕಾರಿ. ಉನ್ನತ ನ್ಯಾಯಾಲಯಗಳಲ್ಲಿ ಮೇಲ್ ಮಧ್ಯಮ ವರ್ಗಕ್ಕೆ ಸೇರಿದ ಸವರ್ಣೀಯರೇ ತುಂಬಿಕೊಂಡಿರುವಾಗ ಮೀಸಲಾತಿಯನ್ನು ಪಡೆಯಲು ಅರ್ಹವಾದ ಸಮುದಾಯಗಳ ಮಾನದಂಡಗಳನ್ನು ಮತ್ತು ಅದಕ್ಕೆ ಸೂಕ್ತವಾದ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ನ್ಯಾಯಾಲಯಗಳಿಗೆ ಬಿಟ್ಟುಕೊಡುವುದರ ಪರಿಣಾಮಗಳು ಊಹಿಸಲಸಾಧ್ಯ.

ಇದರರ್ಥ ಮುಕೇಶ್ ಕುಮಾರ್ ಪ್ರಕರಣದಲ್ಲಿ ನೀಡಲಾಗಿರುವ ತೀರ್ಮಾನದಲ್ಲಿ ಸಮಸ್ಯೆಗಳಿಲ್ಲವೆಂದಲ್ಲ. ಇದು 2012ರಲ್ಲಿ ಉತ್ತರಾಖಂಡ್ ನ ಹರೀಶ್ ರಾವತ್ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಭಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸದೆ ಮೀಸಲಾತಿಯನ್ನು ಜಾರಿ ಮಾಡಲು ತೆಗೆದುಕೊಂಡ ತೀರ್ಮಾನಕ್ಕೆ ಸಂಬಂಧಪಟ್ಟ ಪ್ರಕರಣವಾಗಿದೆ. ಇದು 2006ರಲ್ಲಿ ಎಂ. ನಾಗರಾಜ್ ಮತ್ತು ಭಾರತ ಸರಕಾರ ಹಾಗೂ ಮತ್ತಿತರರ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನಿಗದಿಪಡಿಸಿದ ಪ್ರಕ್ರಿಯೆಗಳನ್ನು ಅನುಸರಿಸದೆ ಜಾರಿ ಮಾಡಿದ ಭಡ್ತಿ ಮೀಸಲಾತಿಯನ್ನು ಉತ್ತರಾಖಂಡ್ ಹೈಕೋರ್ಟು ರದ್ದುಪಡಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ತೆಗೆದುಕೊಂಡ ಕ್ರಮವಾಗಿತ್ತೆಂಬುದು ಸ್ಪಷ್ಟ. ಆದರೆ ಸರಕಾರದ ಸೇವೆಯ ವಿವಿಧ ವರ್ಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯವಿಲ್ಲವೆಂಬುದನ್ನು ದತ್ತಾಂಶಗಳು ಪ್ರಮಾಣಸದೃಶವಾಗಿ ಸಾಬೀತು ಮಾಡಿದ್ದರೂ ಉತ್ತರಾ ಖಂಡ್ ಸರಕಾರ ಭಡ್ತಿ ಮೀಸಲಾತಿ ನೀಡದೆ ನಿಗೂಢ ರೀತಿಯಲ್ಲಿ ಭಡ್ತಿಯನ್ನು ನೀಡಿಬಿಟ್ಟಿತು. 2018ರಲ್ಲಿ ಜರ್ನೈಲ್ ಸಿಂಗ್ ಮತ್ತು ಲಚ್ಮಿ ನರೈನ್ ಗುಪ್ತಾ ಪ್ರಕರಣದಲ್ಲಿ ನೀಡಲಾದ ತೀರ್ಪಿನನ್ವಯ ಯಾವುದಾದರೂ ಸಮುದಾಯಗಳ ಪ್ರಾತಿನಿಧ್ಯವು ಸರಕಾರಿ ಸೇವೆಗಳಲ್ಲಿ ಸೂಕ್ತವಾಗಿಲ್ಲವೆಂದು ಸರಕಾರಗಳಿಗೆ ಮನವರಿಕೆಯಾದಲ್ಲಿ ಮಾತ್ರ ಆ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸಬಹುದು. ಆದರೆ ದತ್ತಾಂಶವು ಪ್ರಮಾಣ ಸದೃಶವಾಗಿ ಸಮುದಾಯಗಳ ಸೂಕ್ತ ಪ್ರಾತಿನಿಧ್ಯವಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತಿದ್ದರೂ ಸರಕಾರವು ಮೀಸಲಾತಿಯನ್ನು ನಿರಾಕರಿಸಬಹುದೇ? ನ್ಯಾಯಾಲಯದ ಮುಂದೆ ಇದ್ದ ಗಂಭೀರವಾದ ಪ್ರಶ್ನೆ ಇದೇ ಆಗಿತ್ತು. ಆದರೂ ಈ ಸೂಕ್ಷ್ಮ ವಿಷಯವನ್ನು ಕೋರ್ಟು ಸಂಪೂರ್ಣವಾಗಿ ಕಡೆಗಣಿಸಿದೆ.

ಈ ಮೂಲಭೂತ ಪ್ರಶ್ನೆಗೆ ಉತ್ತರವನ್ನು ನೀಡುವಾಗ ಭಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸದಿರುವುದಕ್ಕಾಗಿ ಉತ್ತರಾಖಂಡ್ ಸರಕಾರವನ್ನು ಕೋರ್ಟು ಹೊಣೆಗಾರರನ್ನಾಗಿಸಬೇಕಿತ್ತು. ಸರಕಾರಿ ಸೇವೆಗಳಲ್ಲಿ ಪ್ರಾತಿನಿಧ್ಯವು ಸೂಕ್ತಪ್ರಮಾಣದಲ್ಲಿ ಇಲ್ಲದಿರುವುದು ಕಂಡುಬಂದ ನಂತರವೂ ಸರಕಾರವು ಏಕೆ ಮೀಸಲಾತಿ ಅನಗತ್ಯ ಎಂದು ಭಾವಿಸಿತು ಎಂಬ ಸರಳ ಪ್ರಶ್ನೆಯನ್ನು ಕೇಳುವ ಮೂಲಕ ಕೋರ್ಟ್ ಇದನ್ನು ಮಾಡಬಹುದಿತ್ತು. ಸೂಕ್ತವಾದ ಪ್ರಮಾಣ ಸದೃಶ ದತ್ತಾಂಶಗಳು ಇಲ್ಲದಿರುವುದು ಭಡ್ತಿ ಮೀಸಲಾತಿಯನ್ನು ನಿರಾಕರಿಸಲು ಬೇಕಾಗುವಷ್ಟು ಸಮರ್ಥನೆಯನ್ನು ಕೊಡುವುದಾದಲ್ಲಿ, ಸರಿಯಾದ ಪ್ರಾತಿನಿಧ್ಯವಿಲ್ಲವೆಂಬ ಲಭ್ಯ ದತ್ತಾಂಶವು ಇದ್ದಾಗ ಅದು ಹೇಗೆ ಮೀಸಲಾತಿಯನ್ನು ಒದಗಿಸಲು ಬೇಕಾದ ಅವಕಾಶವನ್ನು ಕಲ್ಪಿಸಿಕೊಡಲಾರದು? ಇದು ತರ್ಕಹೀನ ಸಂಗತಿ. ಒಂದು ನಿರ್ದಿಷ್ಟ ಸಮುದಾಯಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ಮೀಸಲಾತಿಯನ್ನು ಒದಗಿಸಬೇಕೆಂದು ಸರಕಾರಕ್ಕೆ ಕೋರ್ಟು ಆದೇಶಿಸಬೇಕಿತ್ತೆಂದು ಯಾರೂ ಇಲ್ಲಿ ವಾದಿಸುತ್ತಿಲ್ಲ. ಬದಲಿಗೆ ಈ ಪ್ರಕರಣದಲ್ಲಿ ಮೀಸಲಾತಿ ಒದಗಿಸದೆ ಭರ್ತಿ ಮಾಡಿಕೊಂಡ ಸರಕಾರದ ಆದೇಶವನ್ನು ರದ್ದು ಮಾಡಿ, ಸರಿಯಾದ ಮತ್ತು ಪ್ರಮಾಣಸದೃಶವಾದ ಆಧಾರದಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರ್ಟು ಸರಕಾರಕ್ಕೆ ಸೂಚನೆ ನೀಡಿದ್ದರೂ ಸಾಕಿತ್ತು. ಹೀಗಾಗಿ ಮೀಸಲಾತಿ ಒದಗಿಸಬೇಕಿಲ್ಲವೆನ್ನುವ ತನ್ನ 2012ರ ಆದೇಶವನ್ನು ಸರಕಾರವು ಸಮರ್ಥಿಸಿಕೊಳ್ಳಬೇಕೆಂದೂ ಒಂದು ವೇಳೆ ಸಮರ್ಥಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಹಳೆಯ ಆದೇಶವನ್ನು ರದ್ದು ಮಾಡಿ ಹೊಸದಾಗಿ ಪ್ರಕರಣವನ್ನು ಪರಿಶೀಲಿಸಬೇಕೆಂದು ಆದೇಶಿಸಬಹುದಿತ್ತು.

ದುರದೃಷ್ಟವಶಾತ್ ಕೋರ್ಟು ಅಂತಹ ಯಾವುದೇ ವಿವರಣೆಯನ್ನು ಕೇಳಿಯೂ ಇಲ್ಲ. ಉತ್ತರಾಖಂಡ್ ಸರಕಾರವು ಒದಗಿಸಿಯೂ ಇಲ್ಲ. ಇಲ್ಲಿ ಅಘೋಷಿತವಾಗಿ ಪಾಲಿಸಲಾಗುತ್ತಿರುವ ಸಾಮಾನ್ಯ ನಿಯಮವೇನೆಂದರೆ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಭಡ್ತಿ ಮೀಸಲಾತಿ ನೀಡದಿರುವುದೇ ಸಹಜ ನಿಯಮವಾಗಿದ್ದು ಅದಕ್ಕೆ ವ್ಯತಿರಿಕ್ತವಾಗಿ ತಮ್ಮ ಸಮುದಾಯಗಳಿಗೆ ಮೀಸಲಾತಿ ಬೇಕೆಂದಾದರೆ ಆ ಅಗತ್ಯವನ್ನು ಅವರು ಸಾಬೀತು ಮಾಡಬೇಕು ಎಂಬುದಾಗಿದೆ. ಇದು ಒಂದು ಉನ್ನತ ವರ್ಗೀಯ ಬ್ರಾಹ್ಮಣಶಾಹಿ ಪ್ರತಿಭೆ ಆಧಾರಿತ ಗ್ರಹಿಕೆಯನ್ನು ಆಧರಿಸಿದ್ದು ಸಾರಭೂತ ಸಮಾನತೆಯ ಬಗ್ಗೆ ನಮ್ಮ ಸಂವಿಧಾನವು ಹೊಣೆಗಾರಿಕೆಯನ್ನು ವಿಧಿಸಿದ್ದರೂ ಚಾಲ್ತಿಯಲ್ಲಿರುವುದು ಮಾತ್ರ ಬೇರೆಯೇ ಆಗಿದೆ. ಮುಕೇಶ್ ಕುಮಾರ್ ಪ್ರಕರಣವು ಆದಿವಾಸಿ ಮತ್ತು ದಲಿತರ ಬಗ್ಗೆ ಕೋರ್ಟುಗಳ ಸಂವೇದನಾಶೂನ್ಯತೆಯನ್ನೂ ಎತ್ತಿತೋರಿಸಿದೆ. ಅದು ಲಭ್ಯ ದತ್ತಾಂಶಗಳು ಸೂಕ್ತವಾದ ಪ್ರಾತಿನಿಧ್ಯ ಇಲ್ಲದಿರುವುದನ್ನು ಎತ್ತಿ ತೋರಿಸುತ್ತಿದ್ದರೂ ಯಾವ ಆಧಾರದಲ್ಲಿ ಮೀಸಲಾತಿಯನ್ನು ಸರಕಾರ ನಿರಾಕರಿಸಿತೆಂದು ಪ್ರಶ್ನಿಸುವ ಗೋಜಿಗೂ ಹೋಗದೆ ಸರಕಾರ ಕೊಟ್ಟ ಹೇಳಿಕೆಯನ್ನು ಯಥಾವತ್ ಅಂಗೀಕರಿಸಿದೆ.

ಇದರ ಹಿಂದೆ ಸಮಾನತೆಯನ್ನು ಖಾತರಿ ಪಡಿಸುವುದು ಸರಕಾರದ ಸಾಂವಿಧಾನಿಕ ಕರ್ತವ್ಯವೆಂಬ ಧೋರಣೆಗಿಂತ ಮೀಸಲಾತಿಯೆಂಬುದು ಸರಕಾರಗಳು ತಮ್ಮ ಇಷ್ಟಾನಿಷ್ಟಗಳಿಗೆ ಅನುಸಾರವಾಗಿ ಕೊಡಬಹುದಾದ ದಾನಭಿಕ್ಷೆಯೆಂಬ ಧೋರಣೆಯೇ ಮನೆಮಾಡಿದೆ. ಸದರಿ ಮುಕೆೇಶ್‌ಕುಮಾರ್ ತೀರ್ಪನ್ನು, ರವಿದಾಸ್ ಮಂದಿರವನ್ನು ಕೆಡವಲು ಆದೇಶಿಸಿದ, ಆದಿವಾಸಿಗಳನ್ನು ಕಾಡಿನಿಂದ ಹೊರಗಟ್ಟಲು ಆದೇಶಿಸಿದ ಹಾಗೂ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ಸಡಿಲಗೊಳಿಸಿ ಹೊರಡಿಸಿದ ಇತ್ತೀಚಿನ ಆದೇಶಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಸಾರ್ವಜನಿಕರ ಬೃಹತ್ ಪ್ರತಿರೋಧಗಳಿಂದಾಗಿ ಇಂತಹ ಕೆಲವು ನಿರ್ಣಯಗಳನ್ನು ತಡೆಹಿಡಿದಿದ್ದರೂ, ಕೆಲವನ್ನು ಹಿಂದೆಗೆದುಕೊಳ್ಳಲಾಗಿದೆ. ಆದರೂ ಅವುಗಳು ನಮ್ಮ ಉನ್ನತ ಕೋರ್ಟುಗಳಲ್ಲಿ ಸವರ್ಣೀಯರ ಆಧಿಪತ್ಯವೇ ಮುಂದುವರಿದಿರುವ ಹಾಗೂ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯ ನಾಮಕಾವಸ್ತೆಯಾಗಿ ಮಾತ್ರ ಇರುವ ವಾಸ್ತವದ ಪ್ರತಿಫಲನವಾಗಿದೆ. ಅಂತಹ ಒಂದು ಸಂಸ್ಥೆಯಿಂದ ಸಂವಿಧಾನಕ್ಕೆ ಬದ್ಧವಾದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಳ ಮೌಲ್ಯದ ಹಿನ್ನೆಲೆಯ ತೀರ್ಪುಗಳನ್ನು ನಿರೀಕ್ಷಿಸುವುದು ದುರಾಸೆಯೇ ಆದೀತು.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News