ಭಾರತದ ಎಡಗೆ ಸ್ಪಿನ್ನರ್ ಪ್ರಜ್ಞಾನ್ ಓಜಾ ನಿವೃತ್ತಿ

Update: 2020-02-21 18:33 GMT

 ಒಂಗಾಲೆ, ಫೆ.21: ಅಂತರ್‌ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಧಿಕೃತ ನಿವೃತ್ತಿ ಘೋಷಿಸಿದ ಪ್ರಜ್ಞಾನ್ ಓಜಾ ಶುಕ್ರವಾರ ತನ್ನ 15 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದರು. 33ರ ಹರೆಯದ ಎಡಗೈ ಸ್ಪಿನ್ನರ್ ಓಜಾ 2005ರಲ್ಲಿ ರೈಲ್ವೇಸ್ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ತಂಡದಲ್ಲಿ ಆಡುವುದರೊಂದಿಗೆ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಆ ಬಳಿಕ ಅವರು ಬಂಗಾಳ ಹಾಗೂ ಬಿಹಾರ ರಣಜಿ ತಂಡವನ್ನು ಪ್ರತಿನಿಧಿಸಿದರು. ಓಜಾ 108 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 424 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಭುವನೇಶ್ವರ ಮೂಲದ ಓಜಾ ಕಾನ್ಪುರದಲ್ಲಿ ಶ್ರೀಲಂಕಾ ವಿರುದ್ಧ 2009ರಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಒಟ್ಟು 24 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಳು ಬಾರಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 113 ವಿಕೆಟ್‌ಗಳನ್ನು ಪಡೆದಿದ್ದಾರೆ. 18 ಏಕದಿನ ಹಾಗೂ 6 ಟ್ವೆಂಟಿ-20 ಪಂದ್ಯಗಳಲ್ಲೂ ಆಡಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ತಲುಪಿದ್ದ ಓಜಾ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಧರಿಸಿದ ಮೊದಲ ಹಾಗೂ ಇಬ್ಬರು ಸ್ಪಿನ್ನರ್‌ಗಳ ಪೈಕಿ ಒಬ್ಬರಾಗಿದ್ದಾರೆ. ‘‘ನಾನು ವೀಕ್ಷಕವಿವರಣೆ ನೀಡಲು ಎದುರು ನೋಡುತ್ತಿರುವೆ. ಅತ್ಯಂತ ಮುಖ್ಯವಾಗಿ ಪುತ್ರ ಯೋಹಾನ್ ಜೊತೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತೇನೆ’’ ಎಂದು ಪ್ರಜ್ಞಾನ್ ಓಜಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News