ರಣಜಿ ಟ್ರೋಫಿಯ: ಕಲಾರಿಯ ಶತಕ, ಸುಸ್ಥಿತಿಯಲ್ಲಿ ಗುಜರಾತ್

Update: 2020-02-22 18:33 GMT

ವಲ್ಸಾಡ್(ಗುಜರಾತ್), ಫೆ.21: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರನೇ ಶತಕ ಸಿಡಿಸಿದ ರೂಶ್ ಕಲಾರಿಯ ನೆರವಿನಿಂದ ಆತಿಥೇಯ ಗುಜರಾತ್ ತಂಡ ಗೋವಾ ವಿರುದ್ಧ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದ ಎರಡನೇ ದಿನವಾದ ಶುಕ್ರವಾರ 8 ವಿಕೆಟ್‌ಗಳ ನಷ್ಟಕ್ಕೆ 602 ರನ್ ಗಳಿಸಿ ಇನಿಂಗ್ಸ್‌ನ್ನು ಡಿಕ್ಲೇರ್ ಮಾಡಿಕೊಂಡಿದೆ.

ಗುಜರಾತ್ ವೇಗಿಗಳು ಗೋವಾದ ಇಬ್ಬರು ಆರಂಭಿಕ ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದ್ದು, ಗೋವಾ ದಿನದಾಟದಂತ್ಯಕ್ಕೆ 46 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ.

ನಾಯಕ ಪಾರ್ಥಿವ್ ಪಟೇಲ್ ಮೊದಲ ದಿನವಾದ ಗುರುವಾರ 27ನೇ ಪ್ರಥಮ ದರ್ಜೆ ಶತಕ ಸಿಡಿಸಿ ಆತಿಥೇಯ ಗುಜರಾತ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಹಾಕಿಕೊಟ್ಟ ಬುನಾದಿಯಲ್ಲಿ ರನ್ ಶಿಖರ ನಿರ್ಮಿಸಿದ ಕಲಾರಿಯ(ಔಟಾಗದೆ 118, 185 ಎಸೆತ, 14 ಬೌಂಡರಿ, 1 ಸಿಕ್ಸರ್)ಹಾಗೂ ಆಲ್‌ರೌಂಡರ್ ಅಕ್ಷರ್ ಪಟೇಲ್(80,113 ಎಸೆತ)ತಂಡದ ಮೊತ್ತ ಹೆಚ್ಚಿ ಸಿದರು. 4 ವಿಕೆಟ್ ನಷ್ಟಕ್ಕೆ 330 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಗುಜರಾತ್ ತಂಡ ಗೋವಾದ ಎಡಗೈ ಮಧ್ಯಮ ವೇಗಿ ಫೆಲಿಕ್ಸ್ ಅಲೆಮಾವೊ(3-86)ದಾಳಿಗೆ ಸಿಲುಕಿ ಪಟೇಲ್ ಹಾಗೂ ಚಿರಾಗ್ ಗಾಂಧಿ ವಿಕೆಟನ್ನು ಕಳೆದುಕೊಂಡಿತು.

ಗಾಂಧಿ ನಿನ್ನೆಯ ಸ್ಕೋರ್‌ಗೆ ಒಂದು ರನ್ ಸೇರಿಸದೇ 49 ರನ್‌ಗೆ ಔಟಾದರು. ಶತಕವೀರ ಹಾಗೂ ನಾಯಕ ಪಾರ್ಥಿವ್ 124 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.ಆಗ ಗುಜರಾತ್‌ನ ಸ್ಕೋರ್ 6ಕ್ಕೆ 356. ಅಕ್ಷರ್ ಹಾಗೂ ಕಲಾರಿಯ 7ನೇ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಿ ಪ್ರವಾಸಿ ಗೋವಾ ತಂಡದ ತಿರುಗೇಟು ನೀಡುವ ಕನಸನ್ನು ಭಗ್ನಗೊಳಿಸಿದರು. ಅಕ್ಷರ್ ಕೇವಲ 20 ರನ್‌ನಿಂದ ಅರ್ಹ ಶತಕದಿಂದ ವಂಚಿತರಾದರೂ ಗೋವಾ ತಂಡಕ್ಕೆ ಸಾಕಷ್ಟು ಹಾನಿ ಮಾಡಿದರು. ಕಲಾರಿಯ ಇಲ್ಲಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಆಕರ್ಷಕ ಶತಕ ಸಿಡಿಸಿದರು. ಟೀ ವಿರಾಮದ ಬಳಿಕ ಆತಿಥೇಯ ಗುಜರಾತ್ 8 ವಿಕೆಟ್‌ಗೆ 602 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News