ಅಸ್ಸಾಂ ಎನ್‌ಆರ್‌ಸಿ ಅಂತಿಮ ಪಟ್ಟಿಯ ಆಂತರಿಕ ತಪಾಸಣೆ ಪ್ರಕ್ರಿಯೆ ಆರಂಭಿಸಿದ ಅಧಿಕಾರಿಗಳು

Update: 2020-02-22 08:52 GMT

ಗುವಹಾಟಿ: ಅಸ್ಸಾಂನಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಪ್ರಕಟಗೊಂಡು ಆರು ತಿಂಗಳುಗಳ ನಂತರ ಅಲ್ಲಿನ ಅಧಿಕಾರಿಗಳು ಆ ಪಟ್ಟಿಯಲ್ಲಿರುವವರ ಪೈಕಿ ಪೌರರಲ್ಲದ ಹೆಸರುಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಆಂತರಿಕ ತಪಾಸಣಾ ಕಾರ್ಯ ಆರಂಭಿಸಿದ್ದು ಎನ್‌ಆರ್‌ಸಿ ಪಟ್ಟಿಯನ್ನು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ ಕಳುಹಿಸುವುದಕ್ಕೆ ಪೂರ್ವಭಾವಿಯಾಗಿ ಈ  ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.

ರಾಜ್ಯ ಎನ್‌ಆರ್‌ಸಿಯ ನೂತನ ಕೊ-ಆರ್ಡಿನೇಟರ್ ಆಗಿರುವ ಹಿರೇಶ್ ದೇವ್ ಶರ್ಮ ಅವರು ಎಲ್ಲಾ 33 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಂಡಿರುವ ಪೌರರಲ್ಲದ ಜನರ ವಿವರಗಳನ್ನು ನೀಡುವಂತೆ ಹೇಳಿದ್ದಾರೆ.

ಅಂತಿಮ ಎನ್‌ಆರ್‌ಸಿ ಪ್ರಕಟಗೊಳ್ಳುವ ಪ್ರಕ್ರಿಯೆಯ ಮುಂಚಿನ ಕ್ರಮ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಮತದಾರರು, ವಿದೇಶೀಯರು ಎಂದು ಘೋಷಿತರಾದವರು ಹಾಗೂ ವಿದೇಶೀಯರ ಟ್ರಿಬ್ಯುನಲ್ ಮುಂದೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿತರು ಹಾಗೂ ಇಂತಹ ವ್ಯಕ್ತಿಗಳ ಕುಟುಂಬಸ್ಥರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಇತ್ತೀಚೆಗೆ ಅಂತಿಮ ಎನ್‌ಆರ್‌ಸಿ ಪಟ್ಟಿ ಅಧಿಕೃತ ವೆಬ್ ತಾಣದಿಂದ ನಾಪತ್ತೆಯಾದ ಬೆನ್ನಲ್ಲೇ ಇದೀಗ ಮತ್ತೆ ಅದು ವೆಬ್‍ತಾಣದಲ್ಲಿ ಕಾಣಿಸಿಕೊಂಡ ನಂತರದ ಬೆಳವಣಿಗೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News