ವರ್ತಮಾನಕ್ಕೆ ಮುಖಾಮುಖಿಯಾಗಲು ಲೇಖಕರಿಗೆ ಕಷ್ಟವಾಗುತ್ತಿದೆ: ವಿನಯಾ ಒಕ್ಕುಂದ

Update: 2020-02-22 11:58 GMT

ಬೆಂಗಳೂರು, ಫೆ.22: ಆಗಿ ಹೋದ ಘಟನೆಗಳ ಕುರಿತು ಸ್ಪಂದಿಸುವಷ್ಟು ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗಲು ಲೇಖಕರಿಗೆ ಕಷ್ಟವಾಗುತ್ತಿದೆ ಎಂದು ಹಿರಿಯ ಲೇಖಕಿ ವಿನಯಾ ಒಕ್ಕುಂದ ವಿಷಾದಿಸಿದ್ದಾರೆ. 

ಶನಿವಾರ ಅಂಕಿತ ಪ್ರಕಾಶನ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೇಖಕರಿಂದ ವರ್ತಮಾನದ ಘಟನೆಗಳನ್ನು ಕಲೆಯಾಗಿ ರೂಪಿಸಲು ಕಷ್ಟವಾಗುತ್ತಿರುವ ಈ ಸಂದರ್ಭದಲ್ಲಿಯೇ ಹಿರಿಯ ಕವಿ ಪ್ರತಿಭಾ ನಂದಕುಮಾರ್ ಕವಿತೆಗಳು ಭರವಸೆಯನ್ನು ಮೂಡಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಕವಯತ್ರಿ ಪ್ರತಿಭಾ ನಂದಕುಮಾರ್ ತಮ್ಮ ನಾಲ್ಕು ದಶಕಗಳಲ್ಲಿ ಬರೆದಿರುವ ಕಾವ್ಯವು, ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವಿಷಯಗಳನ್ನು ಕಾವ್ಯ ರೂಪಕ್ಕೆ ಇಳಿಸಿದ್ದಾರೆ. ವರ್ತಮಾನದ ತಲ್ಲಣಗಳನ್ನು ಕಾವ್ಯದ ಮೂಲಕ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಅವರು ತಿಳಿಸಿದರು.

ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ ಮಾತನಾಡಿ, ಸೂಫಿ ಸಂತರ ಜ್ಞಾನವು ಗ್ರಂಥಗಳಿಂದ ಬಂದಿದ್ದಲ್ಲ. ಅವರು ಸದಾ ಪ್ರಯಾಣದಲ್ಲಿದ್ದು, ಜನರ ಸಂಪರ್ಕದಲ್ಲಿ ನಡೆಸಿದ ಮಾತುಕತೆಯ ಅನುಭವದ ಜ್ಞಾನವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುತ್ತಾ, ಹಾಡಾಗಿಸುತ್ತಾ ಸಾಗಿ ಬಂದಿದ್ದಾರೆಂದು ತಿಳಿಸಿದರು.

ಸೂಫಿ ಸಂತರು ದೇಶಗಳ ಎಲ್ಲೆಗಳನ್ನು ಮೀರಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತಿದ್ದರು. ಹೀಗಾಗಿ ಸೂಫಿ ಚಿಂತನೆಯು ಕುರ್ಆನ್, ಬೈಬಲ್, ವೇದಗಳನ್ನು ಒಳಗೊಂಡಂತೆ ಆಯಾ ಪ್ರದೇಶಗಳ ಆಧ್ಯಾತ್ಮಿಕತೆಯನ್ನು ತನ್ನದಾಗಿಸಿಕೊಂಡು ವಿಶಿಷ್ಟವಾದ ರೀತಿಯಲ್ಲಿ ಹಾಗೂ ಸರಳವಾಗಿ ಆಧ್ಯಾತ್ಮಿಕ ಚಿಂತನೆಯನ್ನು ಪ್ರಸಾರ ಮಾಡುತ್ತಾ ಬಂದಿದ್ದಾರೆಂದು ಅವರು ಹೇಳಿದರು.

ಇವತ್ತು ದೇಶದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಜನರ ಮಧ್ಯೆ ದ್ವೇಷ ಬಿತ್ತುವಂತಹ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಮನಸು ಹಿಂಡಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಸೂಫಿ ಚಿಂತನೆಯನ್ನು ಓದುವುದು, ಆಲಿಸುವುದರಿಂದ ನಮ್ಮೊಳಗೆ ಶಾಂತಿ, ಸೌಹಾರ್ದತೆ, ಸಹಬಾಳ್ವೆಯನ್ನು ಮೂಡಿಸುತ್ತದೆ ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಪೂರ್ವಗ್ರಹ ಪೀಡಿತರಾಗದೆ ಅಧ್ಯಯನದಲ್ಲಿ ತೊಡಗಿದರೆ, ಎಲ್ಲ ಧರ್ಮಗಳು ಪರಸ್ಪರ ಸಂವಾದ ನಡೆಸಿರುವುದನ್ನು ನಾವು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಹಿಂದೂ ಆದ್ಯಾತ್ಮಿಕತೆಗೂ ಸೂಫಿ ಚಿಂತನೆಗೂ ಹತ್ತಿರದ ನಂಟಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಮಾತನಾಡಿ, ಆಧ್ಯಾತ್ಮಿಕತೆಯ ಉತ್ತುಂಗವೇ ಸೂಫಿ ಚಿಂತನೆಯಾಗಿದೆ. ಆಧ್ಯಾತ್ಮಿಕತೆಯನ್ನು ಹೇಗೆ ಅನುಭವಿಸಬೇಕೆಂಬುದನ್ನು ಸೂಫಿ ಸಂತರು ನಮಗೆ ತೋರಿಸಿಕೊಟ್ಟಿದ್ದಾರೆ. ಇದನ್ನು ಫಕೀರ್ ಮುಹಮ್ಮದ್ ಕಟ್ಪಾಡಿ ತಮ್ಮ ‘ಸೂಫಿ ಅಧ್ಯಾತ್ಮ ಚಿಂತನೆಗಳು’ ಕೃತಿಯಲ್ಲಿ ಸರಳವಾಗಿ ನಿರೂಪಿಸಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿರವರ ‘ಸೂಫಿ ಅಧ್ಯಾತ್ಮ ಚಿಂತನೆಗಳು’, ಪ್ರತಿಭಾ ನಂದಕುಮಾರ್‌ರವರ ‘ಕೌಬಾಯ್ಸಾ ಮತ್ತು ಕಾಮ ಪುರಾಣ’, ಚ.ಹ.ರಘುನಾಥ್‌ರವರ ‘ಜಾಮೂನು ಪದ್ಯಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. 

‘ಕಾಗದದ ಸಾಕ್ಷಿ’ ಆಲ್ಬಮ್ ಬಿಡುಗಡೆ

‘ಕಾಗದದ ಸಾಕ್ಷಿ’ಯೆಂಬ ವಿಡಿಯೋ ಆಲ್ಬಮ್ ಬಿಡುಗಡೆ ಮಾಡುತ್ತಿದ್ದೇನೆ. ಈ ಆಲ್ಬಮ್ ಇವತ್ತು ದೇಶದಲ್ಲಿ ನಡೆಯುತ್ತಿರುವ ಹಲವು ತಲ್ಲಣಗಳನ್ನು ಒಳಗೊಂಡಿದೆ. ಈ ಆಲ್ಬಮ್‌ನಲ್ಲಿ ಏನಿದೆ ಎಂದು ಮುಂಚಿತವಾಗಿ ಅಂಕಿತ ಪ್ರಕಾಶನಕ್ಕೆ ತಿಳಿಸಿಲ್ಲ. ಇದರಿಂದ ಏನೇ ಸಮಸ್ಯೆಯಾದರು ಅದನ್ನು ಎದುರಿಸಲು ನಾನು ಸಿದ್ಧ. ಜೈಲಿಗೆ ಹೋಗಲು ಸಿದ್ಧಳಿದ್ದೇನೆ.

-ಪ್ರತಿಭಾ ನಂದಕುಮಾರ್, ಕಾಗದದ ಸಾಕ್ಷಿ ಆಲ್ಬಮ್ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News