ಪ್ರಧಾನಿ ಮೋದಿ ಜನ ಸಾಮಾನ್ಯರು, ಬಡವರ ಬಗ್ಗೆ ಚಿಂತಿಸುತ್ತಿಲ್ಲ: ಮೇಧಾ ಪಾಟ್ಕರ್

Update: 2020-02-22 13:19 GMT

ಬೆಂಗಳೂರು, ಫೆ.22: ದೇಶದ ಸಂಪತ್ತು ಲೂಟಿಕೋರರ ಪಾಲಾಗುತ್ತಿರುವ ಈ ಸಂದರ್ಭದಲ್ಲಿ ಜನಾಂದೋಲನ ಮತ್ತಷ್ಟು ಬಲಿಷ್ಠಗೊಳ್ಳಬೇಕಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಹಾಗೂ ನರ್ಮದಾ ಬಚಾವೋ ಆಂದೋಲನದ ರೂವಾರಿ ಮೇಧಾ ಪಾಟ್ಕರ್ ಕರೆ ನೀಡಿದ್ದಾರೆ.

ಶನಿವಾರ ನಗರದ ಶ್ರೀ ಗೋಡ್ವಾಡ್ ಭವನದಲ್ಲಿ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ 5ನೇ ಅಖಿಲ ಭಾರತ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಪ್ರಧಾನಿ ‘ಸಬ್ ಕೆ ಸಾಥ್ ಸಬ್ ಕೆ ವಿಕಾಸ್’ ಎಂದು ಹೇಳುತ್ತಾರೆ. ನಷ್ಟದ ನೆಪವೊಡ್ಡಿ ಕಾರ್ಪೋರೇಟ್ ಕಂಪೆನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬಿಎಸ್ಸೆನ್ನೆಲ್, ಬಿಪಿಎಲ್, ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳು ನಡೆದಿವೆ. ಈ ಖಾಸಗೀಕರಣದ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ನೀರವ್ ಮೋದಿ, ವಿಜಯ್ ಮಲ್ಯ ಅಂತಹವರು ಸಾವಿರಾರು ಕೋಟಿ ಸಾಲ ಪಡೆದು, ವಿದೇಶಗಳಿಗೆ ಓಡಿ ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರು ಹಾಗೂ ಬಡವರ ಬಗ್ಗೆ ಚಿಂತಿಸುತ್ತಿಲ್ಲ. ಯುವ ಜನರಿಗೆ ಉದ್ಯೋಗ ಕೊಡುವ ಬಗ್ಗೆಯೂ ಗಮನ ಹರಿಸಿಲ್ಲ. ಬರಿ ಸುಳ್ಳುಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಮೇಧಾ ಪಾಟ್ಕರ್ ಹರಿಹಾಯ್ದರು.

ಕೇಂದ್ರ ಸರಕಾರಕ್ಕೆ ಆರ್‌ಬಿಐನ ಮಾಜಿ ಗೌವರ್ನರ್ ರಘುರಾಮ್ ರಾಜನ್, ನೋಟ್ ಬ್ಯಾನ್‌ನಿಂದ ಯಾವುದೇ ಪರಿಣಾಮ ಬೀರಲ್ಲ ಎಂದು ಸಲಹೆ ನೀಡಿದ್ದರು. ಆದರೂ, ಲೆಕ್ಕಿಸದೇ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದರು. ಅದರ ಪರಿಣಾಮವಿಂದು ಸಾಮಾನ್ಯ ಜನರು ಅನುಭವಿಸುತ್ತಿದ್ದಾರೆ. ಇದರಿಂದ ಕಪ್ಪುಹಣವೂ ಬರಲಿಲ್ಲ, ಜನರ ಖಾತೆಗೆ 15 ಲಕ್ಷ ಹಣವೂ ಬರಲಿಲ್ಲ ಎಂದು ಹೇಳಿದರು.

ದೇಶದಾದ್ಯಂತ ಶೇ.90 ರಷ್ಟು ಅಸಂಘಟಿತ ಕಾರ್ಮಿಕ ವಲಯವಿದೆ. ಶ್ರಮಿಕರು ಈ ದೇಶದ ಮಾಲಕರು ಅಂತಾರೆ. ಆದರೆ, ಅವರ ವಿರುದ್ಧ ಕಾನೂನುಗಳು ಮಾಡುತ್ತಾರೆ. ಇಂದು ಅನೇಕ ಕಡೆಗಳಲ್ಲಿ ಕಾರ್ಮಿಕರಿಂದ ಬಲವಂತವಾಗಿ ವಿಆರ್‌ಎಸ್ ಪಡೆಯುತ್ತಿದ್ದಾರೆ. ಆ ಮೂಲಕ ಎಲ್ಲವನ್ನೂ ಖಾಸಗೀಕರಣಕ್ಕೆ ಒಳಪಡಿಸಲು ಮುಂದಾಗಿದ್ದಾರೆ ಎಂದು ಮೇಧಾ ಪಾಟ್ಕರ್ ನುಡಿದರು.

ದೇಶದಲ್ಲಿ ಸಂಧಾನ ಎದುರಿಸುತ್ತಿರುವ ಅಪಾಯ ಬ್ಯಾಂಕಿಂಗ್ ವಲಯಕ್ಕೂ ವಿಸ್ತರಿಸಿದೆ. ದೇಶದ ಸಾರ್ವಜನಿಕ ಬ್ಯಾಂಕ್‌ಗಳು ಸಂಕಷ್ಟದಲ್ಲಿವೆ. ದೇಶ ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಸಾರ್ವಜನಿಕ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಇಲ್ಲವೇ ಮುಚ್ಚುವ ಹುನ್ನಾರ ನಡೆದಿದೆ. ಇವು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದರು. ದೇಶದಲ್ಲಿ ರೈತರ ಆತ್ಮಹತ್ಯೆಗಳು ನಡೆದೇ ಇದೆ. ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಅವರ ಬದುಕು ಸುಧಾರಿಸುವ ಕೆಲಸ ಆಗಿಲ್ಲ. ಕೇಂದ್ರ ಸರಕಾರ ಹುಸಿ ಭರವಸೆ ನೀಡುತ್ತಿದೆ. ಇದರ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಮೇಧಾ ಪಾಟ್ಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಚಿಂತಕ ಹಾಗೂ ಬರಹಗಾರ ದೇವನೂರ ಮಹಾದೇವ, ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಖ್ಯಸ್ಥ ಎಸ್.ಆರ್.ಹಿರೇಮಠ, ಸಂಸದ ಭಗವತ್ ಮೆನನ್, ಸಂಘದ ಅಧ್ಯಕ್ಷ ಜೆ.ಎಸ್.ವಿಶ್ವನಾಥ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News