ಸಾಬರಮತಿ ಆಶ್ರಮ ಭೇಟಿಯೊಂದಿಗೆ ಟ್ರಂಪ್ ಭಾರತ ಪ್ರವಾಸ ಇಂದು

Update: 2020-02-24 03:43 GMT

ಹೊಸದಿಲ್ಲಿ, ಫೆ.24: ಇಂದಿನಿಂದ ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ, ಪುತ್ರಿ ಇವಾಂಕ ಮತ್ತು ಅಳಿಯ ಜರೆಡ್ ಕುಶ್ನೆನ್ "ನಮಸ್ತೆ ಟ್ರಂಪ್" ಕಾರ್ಯಕ್ರಮಕ್ಕೆ ಮುನ್ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುವುದು ಕೊನೆಕ್ಷಣದಲ್ಲಿ ದೃಢಪಟ್ಟಿದೆ.

ಅದ್ದೂರಿ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಹೊಸ ಮೊಟೇರಾ ಸ್ಟೇಡಿಯಂ ಸಜ್ಜಾಗಿದ್ದು, ಸ್ಟೇಡಿಯಂಗೆ ಆಗಮಿಸುವ ಮಾರ್ಗಮಧ್ಯದಲ್ಲಿ ಟ್ರಂಪ್ ಕುಟುಂಬ ಕೆಲ ಸಮಯವನ್ನು ಸಾಬರಮತಿ ಆಶ್ರಮದಲ್ಲಿ ಕಳೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಬೆಳಗ್ಗೆ 11:40ಕ್ಕೆ ಟ್ರಂಪ್ ನೇತೃತ್ವದ ಅಮೆರಿಕ ನಿಯೋಗವನ್ನು ಹೊತ್ತ ವಿಶೇಷ ವಿಮಾನ ಅಹ್ಮದಾಬಾದ್‌ನ ಸರ್ದಾರ್ ವಲ್ಲಭಬಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ವಿಮಾನ ನಿಲ್ದಾಣದಿಂದ ನೇರವಾಗಿ ಸಾಬರಮತಿ ಆಶ್ರಮಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಮಧ್ಯಾಹ್ನ 1:05ಕ್ಕೆ ಸರಿಯಾಗಿ ಟ್ರಂಪ್ ನಿಯೋಗ ಮೊಟೇರಾ ಕ್ರೀಡಾಂಗಣ ತಲುಪಲಿದೆ.

ವಿಮಾನ ನಿಲ್ದಾಣದಿಂದ ಆಶ್ರಮ ಮತ್ತು ಆಶ್ರಮದಿಂದ ಸ್ಟೇಡಿಯಂಗೆ ಟ್ರಂಪ್ ಅವರ ರೋಡ್‌ಶೋ ಆಯೋಜಿಸಲಾಗಿದೆ. ಮಾರ್ಗಮಧ್ಯದಲ್ಲಿ ಬರುವ ಸಾಬರಮತಿ ಆಶ್ರಮಕ್ಕೆ ಟ್ರಂಪ್ ಭೇಟಿ ಕೊನೆಕ್ಷಣದಲ್ಲಿ ದೃಢಪಟ್ಟಿದೆ. ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಹಾಗೂ ಜಪಾನಿ ಪ್ರಧಾನಿ ಶಿಂಝೊ ಅಬೆ ಸೇರಿದಂತೆ ಹಲವು ಮಂದಿ ವಿಶ್ವ ನಾಯಕರು ಇತ್ತೀಚಿನ ವರ್ಷಗಳಲ್ಲಿ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

ಅಪರಾಹ್ನ 3:30ಕ್ಕೆ ಆಗ್ರಾಗೆ ಹೊರಡುವ ಟ್ರಂಪ್, 4.45ಕ್ಕೆ ಆಗ್ರಾ ತಲುಪಿ 5.15ಕ್ಕೆ ವಿಶ್ವವಿಖ್ಯಾತ ತಾಜ್‌ಮಹಲ್‌ಗೆ ಭೇಟಿ ನೀಡುವರು. ರಾತ್ರಿ 7.30ಕ್ಕೆ ದೆಹಲಿಯ ಪಾಲಂ ವಾಯನೆಲೆ ತಲುಪುವರು. ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತದ ಬಳಿಕ, ರಾಜಘಾಟ್‌ನಲ್ಲಿರುವ ಗಾಂಧಿ ಸಮಾಧಿಗೆ ತೆರಳಿ ನಮನ ಸಲ್ಲಿಸುವರು. 11 ಗಂಟೆ ಬಳಿಕ ಮೋದಿ ಜತೆ ಚರ್ಚಿಸುವ ಅಮೆರಿಕ ಅಧ್ಯಕ್ಷರು 12.40ಕ್ಕೆ ಒಪ್ಪಂದಗಳ ವಿನಿಮಯ ಮಾಡಿಕೊಳ್ಳುವರು. ಬಳಿಕ ಹೈದರಾಬಾದ್ ಹೌಸ್‌ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವರು. ರಾತ್ರಿ 7.30ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜತೆ ಚರ್ಚೆ ನಡೆಸಿ ರಾತ್ರಿ 10ಕ್ಕೆ ಅಮೆರಿಕಕ್ಕೆ ವಾಪಸ್ಸಾಗುವರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News