ಭಾರತಕ್ಕೆ ಹೀನಾಯ ಸೋಲು: ನ್ಯೂಝಿಲೆಂಡ್ ವಿಜಯದ ಶತಕ!

Update: 2020-02-24 03:50 GMT

ವೆಲ್ಲಿಂಗ್ಟನ್, ಫೆ.24: ಪ್ರವಾಸಿ ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ನ್ಯೂಝಿಲೆಂಡ್ ತಂಡ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಅಭೇದ್ಯ ಮುನ್ನಡೆ ಸಾಧಿಸಿದೆ. ಇದರೊಂದಿಗೆ ನ್ಯೂಝಿಲೆಂಡ್ ತಂಡ 100ನೇ ಟೆಸ್ಟ್ ಜಯ ದಾಖಲಿಸಿದ ಕೀರ್ತಿಗೆ ಪಾತ್ರವಾಯಿತು.

183 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಭಾರತ 3ನೇ ದಿನದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ನಾಲ್ಕನೇ ದಿನ ಟಿಮ್ ಸೌಥಿ (5/61)ಯವರ ಮಾರಕ ದಾಳಿಗೆ ತತ್ತರಿಸಿ 191 ರನ್‌ಗಳಿಗೆ ಆಲೌಟ್ ಆಯಿತು. ಸತತ ಎರಡು ಇನಿಂಗ್ಸ್‌ಗಳಲ್ಲಿ 200ರ ಗಡಿ ತಲುಪಲೂ ಭಾರತ ವಿಫಲವಾಯಿತು. ನಿನ್ನೆಯ ಮೊತ್ತಕ್ಕೆ ನಾಲ್ಕು ರನ್ ಸೇರಿಸುವಷ್ಟರಲ್ಲಿ ಅಜಿಂಕ್ಯ ರಹಾನೆಯವರನ್ನು ಕಳೆದುಕೊಂಡಿತು. ಸೌಥಿಗೆ ಉತ್ತಮ ಸಾಥ್ ನೀಡಿದ ಟ್ರೆಂಟ್ ಬೋಲ್ಟ್ 39 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿದರು. ಗ್ರ್ಯಾಂಡ್‌ಹೋಮ್ ಉಳಿದ ಒಂದು ವಿಕೆಟ್ ಪಡೆದರು.
ಎರಡನೇ ಇನಿಂಗ್ಸ್‌ನಲ್ಲಿ ಕೇವಲ 9 ರನ್‌ಗಳ ಗುರಿ ತಲುಪಲು ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಕೇವಲ 10 ಎಸೆತ ಸಾಕಾಯಿತು.
ಭಾರತದ ಆರಂಭಿಕ ಆಟಗಾರ ಮಯಾಂಕ್ ಅಗರ್‌ವಾಲ್ (58) ಅವರನ್ನು ಹೊರತುಪಡಿಸಿದರೆ ಭಾರತದ ಇತರ ಯಾವ ಬ್ಯಾಟ್ಸ್‌ಮನ್‌ಗಳೂ 30ರ ಗಡಿ ದಾಟಲು ಸಾಧ್ಯವಾಗದೇ ಭಾರತ ಅತಿಥೇಯರಿಗೆ ಸುಲಭದ ತುತ್ತಾಯಿತು.

ಐದು ವಿಕೆಟ್ ಗಳ ಗೊಂಚಲು ಸಹಿತ ಒಟ್ಟು 9 ವಿಕೆಟ್ ಗಳನ್ನು ಕಿತ್ತು ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಟಿಮ್ ಸೌಥಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News