ಬಿಎಸ್‌ವೈ ವಿರುದ್ಧ ಅನಾಮಧೇಯ ಪತ್ರ ಬರೆದವರು ಯಾರೆಂಬುದು ಗೊತ್ತು: ರೇಣುಕಾಚಾರ್ಯ

Update: 2020-02-24 12:34 GMT

ಬೆಂಗಳೂರು,ಫೆ. 24: ಮುಖ್ಯಮಂತ್ರಿ ಯಡಿಯೂರಪ್ಪರ ವಿರುದ್ಧ ಅನಾಮಧೇಯ ಪತ್ರ ಬರೆದವರ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ, ಸೂಕ್ತ ಸಂದರ್ಭದಲ್ಲಿ ಯಾರು ಪತ್ರ ಬರೆದಿದ್ದಾರೆಂದು ಬಹಿರಂಗಪಡಿಸುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರ್ಯಾರು ಪತ್ರ ಬರೆದಿಲ್ಲ. ಬದಲಿಗೆ ಹತಾಶ ಮನೋಭಾವದ ಕೆಲವರು ಅಧಿಕಾರದ ಹುಚ್ಚಿನಿಂದ, ಮಾನಸಿಕ ಅಸ್ವಸ್ಥರಾಗಿ ಪತ್ರ ಬರೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ಅಸ್ಥಿರಗೊಳ್ಳಲು ಸಾಧ್ಯವಿಲ್ಲ. 117 ಮಂದಿ ಶಾಸಕರು ಬಿಎಸ್‌ವೈ ಜೊತೆಯಲ್ಲಿದ್ದೇವೆ. ಅವರು ಇನ್ನು ಮೂರುವರೆ ವರ್ಷ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದರು.

ಕೆಲವರು ಬಾಯಿಚಟಕ್ಕೆ ಬಿಜೆಪಿ ಸರಕಾರ ಅಸ್ಥಿರಗೊಳ್ಳಲಿದೆ ಎಂದು ಹೇಳುತ್ತಾರೆ. ಆದರೆ, ನಾವು ಎಲ್ಲ ಶಾಸಕರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಮೂಲ- ವಲಸಿಗರೆಂಬ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಜೀನಾಮೆ ಹೇಳಿಕೆ ನೀಡಿಲ್ಲ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ‘ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹೇಳಿದ್ದಾರೆ. ಆದರೆ, ಅವರು ರಾಜೀನಾಮೆ ನೀಡುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ಬಿಎಸ್‌ವೈ ಅವರ ಹುಟ್ಟುಹಬ್ಬ ರಾಜಕೀಯೇತರ ಕಾರ್ಯಕ್ರಮ. ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ಅದು ಬಲ ಪ್ರದರ್ಶನ ಕಾರ್ಯಕ್ರಮವೂ ಅಲ್ಲ ಎಂದ ಅವರು, ನನ್ನ ಮತ್ತು ಡಿಕೆಶಿ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News