ಶಾಸಕರ ಭವನಕ್ಕೆ ಮಾಧ್ಯಮಗಳ ನಿಷೇಧ: ಸ್ಪೀಕರ್ ತೀರ್ಮಾನಕ್ಕೆ ಮಾಜಿ ಸ್ಪೀಕರ್ ಕೋಳಿವಾಡ ಆಕ್ಷೇಪ

Update: 2020-02-24 12:41 GMT

ಬೆಂಗಳೂರು, ಫೆ.24: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲು ವಿಧಾನಸಭೆಗೆ ಮಾಧ್ಯಮಗಳನ್ನು ನಿರ್ಬಂಧಿಸಿದರು. ಇದೀಗ ಶಾಸಕರ ಭವನಕ್ಕೂ ನಿರ್ಬಂಧ ಹಾಕಿದ್ದಾರೆ. ಯಾವ ಕಾರಣಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ದೃಶ್ಯ ಮಾಧ್ಯಮಗಳನ್ನು ಸದನದಿಂದ ಹೊರಗೆ ಇಟ್ಟಿರುವುದರಿಂದ, ವಿಧಾನಸಭೆಯಲ್ಲಿ ನಡೆಯುವ ಕಾರ್ಯಕಲಾಪಗಳು ನೇರವಾಗಿ ಜನ ಸಾಮಾನ್ಯರಿಗೆ ತಲುಪುವುದಿಲ್ಲ. ಎಲ್ಲವನ್ನೂ ಎಡಿಟ್ ಮಾಡಿ ಪ್ರಸಾರ ಮಾಡುವಂತಹ ಪರಿಸ್ಥಿತಿ ಇದೆ ಎಂದರು.

ಶಾಸಕರ ವೈಯಕ್ತಿಕ ವಿಚಾರಗಳು ಇದ್ದರೆ ಅದನ್ನು ಅವರ ಕ್ಷೇತ್ರದಲ್ಲಿ ಇಟ್ಟುಕೊಳ್ಳಲಿ. ಈ ರೀತಿ ಜನರನ್ನು ಹಾಗೂ ಮಾಧ್ಯಮಗಳನ್ನು ಶಾಸಕರ ಭವನದ ಒಳಗಡೆ ಪ್ರವೇಶಿಸಲು ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಈ ಕೂಡಲೆ ಸ್ಪೀಕರ್ ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಇದರಿಂದ, ಪಕ್ಷದ ಚಟುವಟಿಕೆಗಳ ಪರಿಣಾಮ ಬೀರುತ್ತದೆ. ಬಹುಷಃ ಅಧಿವೇಶನ ಮುಕ್ತಾಯವಾದ ನಂತರ ಅಧ್ಯಕ್ಷರ ನೇಮಕವಾಗಬಹುದು ಎಂದು ಕೋಳಿವಾಡ ಹೇಳಿದರು. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿಗೆ ನಮಗೆ ಅವಕಾಶ ಸಿಗುತ್ತಿಲ್ಲ. ಒಂದೆಡೆ ಅಧ್ಯಕ್ಷರ ನೇಮಕವಾಗಿಲ್ಲ, ಮತ್ತೊಂದೆಡೆ ಎಲ್ಲ ಪದಾಧಿಕಾರಿಗಳನ್ನು ವಿರ್ಸಜಿಸಿದ್ದಾರೆ. ಇಲ್ಲಿಯವರೆಗೆ ಪದಾಧಿಕಾರಿಗಳ ನೇಮಕವಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಆದಷ್ಟು ಬೇಗ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಅವರು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ರಾಜ್ಯ ಸರಕಾರ ಈವರೆಗೆ ಸರಕಾರಿ ಕಾರು ಮಂಜೂರು ಮಾಡದೇ ಇರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕೋಳಿವಾಡ, ಮುಖ್ಯಮಂತ್ರಿಯಷ್ಟೇ ಪ್ರತಿಪಕ್ಷದ ನಾಯಕರಿಗೂ ಬೆಲೆಯಿದೆ. ಆದರೆ, ಸರಕಾರ ಈವರೆಗೆ ಸಿದ್ದರಾಮಯ್ಯಗೆ ಸರಕಾರಿ ಕಾರು ನೀಡದೇ ಇರುವುದು ಸರಿಯಲ್ಲ ಎಂದರು.

ಮಾಜಿ ಶಾಸಕರ ಮೆಡಿಕಲ್ ಬಿಲ್‌ಗಳು ಇನ್ನೂ ಇತ್ಯರ್ಥವಾಗಿಲ್ಲ. ಎಲ್ಲ ಕಡತಗಳು ಸ್ಪೀಕರ್ ಕಚೇರಿಯಲ್ಲೇ ಇವೆ. ನನ್ನದೇ 17 ಬಿಲ್‌ಗಳನ್ನು ಕೊಟ್ಟಿದ್ದೇನೆ. ಅದರಲ್ಲಿ ಒಂದು ಮಾತ್ರ ಇತ್ಯರ್ಥವಾಗಿದೆ. ಅನೇಕ ಮಾಜಿ ಶಾಸಕರಿಂದ ಈ ಬಗ್ಗೆ ದೂರುಗಳು ಬರುತ್ತಿವೆ. ಸರಕಾರದ ಬಳಿ ಹಣ ಇಲ್ಲ ಎನ್ನುತ್ತಾರೆ. ಯಾವ ರೀತಿ ಈ ಸರಕಾರ ಆಡಳಿತ ಮಾಡುತ್ತಿದೆ ಅನ್ನೋದು ಗೊತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಅಣತಿಯಂತೆ...

ಸ್ಪೀಕರ್ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಅವರ ಪಕ್ಷದ ಅಣತಿಯಂತೆಯೇ ನಡೆದುಕೊಳ್ಳುತ್ತಿರಬಹುದು. ಸ್ಪೀಕರ್ ಆಗಿ ಆಯ್ಕೆಯಾದ ನಂತರ ತಾವು ಪ್ರತಿನಿಧಿಸುತ್ತಿರುವ ಪಕ್ಷಕ್ಕೆ ರಾಜೀನಾಮೆ ನೀಡಬೇಕು. ಎಲ್ಲ ಪಕ್ಷಗಳಿಗೂ ಸಮಾನವಾಗಿ ಕಾಣಬೇಕು. ಆದರೆ, ಯಾಕೋ ಅವರ ನಡೆಯ ಬಗ್ಗೆ ಅನುಮಾನವಿದೆ.

-ಕೆ.ಬಿ.ಕೋಳಿವಾಡ, ಮಾಜಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News