ಕಲಾತ್ಮಕ ಚಿತ್ರಗಳು ಜನರಿಗೆ ತಲುಪುತ್ತಿಲ್ಲ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2020-02-24 17:00 GMT

ಬೆಂಗಳೂರು, ಫೆ. 24: ಕನ್ನಡದ ಕಲಾತ್ಮಕ ಅಥವಾ ಪರ್ಯಾಯ ಚಲನಚಿತ್ರಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಕಲಾ ಕಾಲೇಜಿನಲ್ಲಿ ರಾಜರಾಜೇಶ್ವರಿ ಸಿನಿ ಆರ್ಟ್ಸ್ ಹಾಗೂ ಕಲಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ಸಮುದಾಯದತ್ತ ಸಿನಿಮಾ, ಚಿತ್ರಯಾತ್ರೆ-250 ಪ್ರದರ್ಶನದ ಭಾಗವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಚಿತ್ರಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲಾತ್ಮಕ ಚಿತ್ರವನ್ನು ನೋಡುವ ಪ್ರೇಕ್ಷಕ ವರ್ಗ ಮರೆಯಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಕಲಾತ್ಮಕ ಚಿತ್ರಗಳು ಬಿಡುಗಡೆಯಾದರೂ ಬೆಂಗಳೂರಿನಿಂದಾಚೆಗೆ ಹೋಗುವುದು ವಿರಳವಾಗಿದೆ ಎಂದರು. ಹಿಂದಿನ ದಿನಗಳಲ್ಲಿ ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುವುದಿಲ್ಲವೆಂಬ ಕೊರಗಿತ್ತು. ಈಗ ಚಿತ್ರಮಂದಿರ ದೊರೆತರೂ, 70-80ರ ದಶಕದಲ್ಲಿ ಚಿತ್ರ ವೀಕ್ಷಿಸಲು ಬರುತ್ತಿದ್ದ ಪ್ರೇಕ್ಷಕರ ಪ್ರಮಾಣ ಇದೀಗ ಕ್ಷೀಣಿಸುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾನು ಕಂಡುಕೊಂಡ ಮಾರ್ಗವೇ ಸಮುದಾಯದತ್ತ ಸಿನಿಮಾ ಎಂಬ ಘೋಷವಾಕ್ಯವನ್ನು ಹೊತ್ತ ‘ಚಿತ್ರಯಾತ್ರೆ’ ಎಂದು ತಿಳಿಸಿದರು.

ಚಿತ್ರಯಾತ್ರೆಯು ಕಲಾತ್ಮಕ ಚಿತ್ರಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದೆ. ಈ ಯಾತ್ರೆಯಲ್ಲಿ ನನ್ನ ನಿರ್ದೇಶನದ ಶಾಂತಿ, ಶಬರಿ ಮೊದಲಾದ ಚಿತ್ರಗಳೂ ಪ್ರದರ್ಶನಗೊಂಡಿವೆ. ಪ್ರಾಯೋಜಿತ ಪ್ರದರ್ಶನಗಳ ಹಣ ನಿರ್ಮಾಪಕರ ಕೈ ಸೇರಿತು. ಈ ಚಿತ್ರಯಾತ್ರೆಯಿಂದ ಸಾಕಷ್ಟು ಜನರಿಗೆ ಚಿತ್ರವನ್ನು ತಲುಪಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಚಲನಚಿತ್ರ ನಟ ಸುಂದರರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕುಟುಂಬ ಸದಸ್ಯರೆಲ್ಲರೂ ಕುಳಿತು ನೋಡುವಂತ ಚಿತ್ರ ಬರುತ್ತಿಲ್ಲ. ಡಾ. ರಾಜ್‌ಕುಮಾರ್ ಅಭಿನಯಿಸಿರುವ ಚಿತ್ರಗಳೆಲ್ಲವೂ ಕೌಟುಂಬಿಕ ಚಿತ್ರಗಳಾಗಿದ್ದವು. ಹೀಗಾಗಿ ಸಾಮಾಜಿಕ, ಕೌಟುಂಬಿಕ, ಸಂಪ್ರದಾಯ, ಸಂಸ್ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಕಲಾತ್ಮಕ ಚಿತ್ರಗಳನ್ನು ಹೊರ ತರಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಗಾಯಕಿ ಶಮಿತಾ ಮಲ್ನಾಡ್, ನಟ ರಂಜಿತ್, ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎಂ.ಎ. ನೀಲಾವತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News