ಗೋದಾಮುಗಳಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ: ಅಧಿಕಾರಿಗಳ ವಿರುದ್ಧ ಆಕ್ರೋಶ, ಎಚ್ಚರಿಕೆ

Update: 2020-02-24 16:58 GMT

ಬೆಂಗಳೂರು, ಫೆ. 24: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ. ಗೋಪಾಲಯ್ಯ, ಇಲಾಖೆ ಆಡಳಿತ ಕಚೇರಿ ಮತ್ತು ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಎಚ್ಚರಿಕೆಯನ್ನು ನೀಡಿದ್ದಾರೆ.

ಸೋಮವಾರ ಬೆಳಗ್ಗೆ ಮೊದಲಿಗೆ ಇಲ್ಲಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಆಡಳಿತ ಕಚೇರಿಗೆ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಕಚೇರಿಯಲ್ಲಿ ಶೇ.50ರಷ್ಟು ಅಧಿಕಾರಿ ಮತ್ತು ಸಿಬ್ಬಂದಿ ಗೈರು ಹಾಜರಾಗಿದ್ದರು. ಖುದ್ದು ಹಾಜರಾತಿ ಪುಸ್ತಕ ಪರಿಶೀಲಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಾಜರಾತಿ ಪುಸ್ತಕ ಇಲ್ಲಿ ಇಟ್ಟಿರುವುದು ಏಕೆ? ಸಹಿ ಹಾಕಲು ಆಗುವುದಿಲ್ಲ ಎಂದರೆ ಕಚೇರಿಗೆ ಏಕೆ ಬರಬೇಕು. ಇದೇನು ಛತ್ರವೇ? ಇಷ್ಟ ಬಂದಾಗ ಬರೋಕೇ ಮತ್ತು ಹೋಗೋಕೆ? ಎಂದು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ನಿಮ್ಮ ಮನೆಯಲ್ಲಿಯೂ ಹೀಗೆ ಇರುತ್ತಾ..: ಇನ್ನು ಆಡಳಿತ ಕಚೇರಿಯ ಶೌಚಾಲಯದ ಅವ್ಯವಸ್ಥೆಯನ್ನು ಕಂಡ ಗೋಪಾಲಯ್ಯ,‘ ಇದೇನು ಶೌಚಾಲಯವೋ ಅಥವಾ ಇನ್ನೇನೋ..ನಿಮ್ಮ ಮನೆಯಲ್ಲಿಯೂ ಹೀಗೆ ಇಟ್ಟುಕೊಳ್ತೀರಾ? ಎಂದು ಅಸಮಾಧಾನ ಹೊರಹಾಕಿದರು.

ಆ ಬಳಿಕ ಯಶವಂತಪುರದಲ್ಲಿನ ಆಹಾರ ಇಲಾಖೆ ಗೋದಾಮಿಗೆ ಭೇಟಿ ನೀಡಿದ ಸಚಿವ ಗೋಪಾಲಯ್ಯ, ಗೋದಾಮು ಸರಿಯಾಗಿ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ಸರಿಯಾಗಿ ನಿರ್ವಹಣೆ ಮಾಡಬೇಕೆಂದು ನಿರ್ದೇಶನ ನೀಡಿದರು.

ಅನಂತರ ಮಾತನಾಡಿದ ಸಚಿವ ಗೋಪಾಲಯ್ಯ, ನಾನು ಹೊಸದಾಗಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನಗೆ ಸಮಯ ನೀಡಿದರೆ ಈ ಗೋಪಾಲಯ್ಯ ಏನು ಎಂದು ತೋರಿಸುತ್ತೇನೆ. ದಾಸ್ತಾನು ಸಂಗ್ರಹಕ್ಕೆ ಯಶವಂತಪುರದಲ್ಲಿ 15 ಅಂತಸ್ತಿನ ಗೋಡಾನ್ ನಿರ್ಮಾಣ ಪ್ರಸ್ತಾವ ಸರಕಾರದ ಮುಂದಿದೆ ಎಂದರು. ಯಾವುದೇ ಕಾರಣಕ್ಕೂ ಪಡಿತರ ಅಕ್ಕಿ ಕಡಿಮೆ ಮಾಡುವುದಿಲ್ಲ. ಏಳು ಕೆಜಿ ನೀಡಲಾಗುತ್ತಿದ್ದು, ಅದನ್ನು ಮುಂದುವರಿಸಲಾಗುತ್ತಿದೆ. ಉಳಿದಂತೆ ಪಡಿತರ ಹೆಚ್ಚು ಮಾಡುವುದು ಅಥವಾ ಕಡಿಮೆ ಮಾಡುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ತೀರ್ಮಾನಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News