ಅರಣ್ಯ ಸಚಿವ ಆನಂದ್‌ ಸಿಂಗ್ ವಿರುದ್ಧದ ಚಾರ್ಜ್‌ಶೀಟ್ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರು

Update: 2020-02-24 14:24 GMT

ಬೆಂಗಳೂರು, ಫೆ.24: ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ 14 ಪ್ರಕರಣಗಳು ದಾಖಲಾಗಿದ್ದು, 7 ಪ್ರಕರಣದಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಎಲ್ಲ ಪ್ರಕರಣಗಳು ಅರಣ್ಯ ಇಲಾಖೆಗೆ ಸಂಬಂಧಿಸಿದ್ದರೂ, ಅವರಿಗೆ ಅರಣ್ಯ ಇಲಾಖೆಯನ್ನು ನೀಡುವ ಮೂಲಕ ಯಡಿಯೂರಪ್ಪ ಸರಕಾರ ತೋಳವನ್ನೆ ಕುರಿ ಕಾಯಲು ಬಿಟ್ಟಂತೆ ಆಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧದ 14 ಪ್ರಕರಣಗಳ ಚಾರ್ಜ್‌ಶೀಟ್ ದಾಖಲೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತದ ಭರವಸೆ ನೀಡುವ ಪ್ರಧಾನಿ ನರೇಂದ್ರ ಮೋದಿ, ಈ ಕೂಡಲೆ ಆನಂದ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ನಿರ್ದೇಶನ ನೀಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಅರಣ್ಯ ಸಂಪತ್ತು ದೋಚುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಆನಂದ್‌ ಸಿಂಗ್ ಪರವಾಗಿ ಸಮರ್ಥನೆಗೆ ರಾಜ್ಯ ಬಿಜೆಪಿ ಸರಕಾರ ಕತೆಗಳು, ಕಾರಣಗಳನ್ನು ಹೇಳದೇ ಆನಂದ್‌ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಿ. ಒಟ್ಟು ಏಳು ಪ್ರಕರಣಗಳಲ್ಲಿ ಅವರು 20.55 ಕೋಟಿ ರೂ.ಗಳನ್ನು ಸರಕಾರಕ್ಕೆ ವಂಚಿಸಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಧೃತರಾಷ್ಟ್ರ ಬಿಎಸ್‌ವೈ

ಮುಖ್ಯಮಂತ್ರಿ ಯಡಿಯೂರಪ್ಪ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಧೃತರಾಷ್ಟ್ರರಾಗಿದ್ದಾರೆ. ಅವರಿಗೆ ತಮ್ಮ ಸುತ್ತಮುತ್ತ ಇರುವವರು, ಅವರ ಮಕ್ಕಳು ಮಾತ್ರ ಕಾಣುತ್ತಿದ್ದಾರೆ. ಉಳಿದ ಯಾವ ವಿಚಾರಗಳು ಅವರ ಗಮನಕ್ಕೆ ಬರುತ್ತಿಲ್ಲವೇನೋ?

-ವಿ.ಎಸ್. ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News